ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ಬೆಂಗಳೂರು: ಇತ್ತೀಚೆಗೆ ಕೋಲಾರದ ಮಾಲೂರಿನ ಶಾಲೆಯೊಂದರಲ್ಲಿ ಮಕ್ಕಳಿಂದಲೇ ಶೌಚ ಗುಂಡಿ ಸ್ವಚ್ಛ ಮಾಡಿಸಿದ ಘಟನೆ ನಡೆದಿತ್ತು. ಇದರ ಬೆನ್ನಲ್ಲೇ ಇದೀಗ ಬೆಂಗಳೂರಿನ ಯಶವಂತಪುರದ ಅಂದ್ರಹಳ್ಳಿಯ ಸರ್ಕಾರಿ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಿಂದಲೇ ಶೌಚಾಲಯ ಸ್ವಚ್ಛ ಮಾಡಿಸಿದ ಘಟನೆಯ ವಿಡಿಯೋ ವೈರಲ್ ಆಗಿದೆ. ಮಕ್ಕಳ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ನಮ್ಮ ಮಕ್ಕಳನ್ನು ಶಾಲೆಗೆ ಓದಲು ಕಳುಹಿಸುತ್ತೇವೆ. ಆದರೆ, ಶಾಲಾ ಸಿಬ್ಬಂದಿ ಶೌಚಾಲಯ ಸ್ವಚ್ಛ ಮಾಡಿಸಿದ್ದಾರೆ. ಇವರ ಮೇಲೆ ಯಾವ ನಂಬಿಕೆ ಇಟ್ಟು ಮಕ್ಕಳನ್ನು ಶಾಲೆಗೆ ಕಳುಹಿಸಬೇಕು?, ತಪ್ಪು ಮಾಡಿದವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು" ಎಂದು ಪೋಷಕರೊಬ್ಬರು ಆಗ್ರಹಿಸಿದರು.
ಗೃಹ ಸಚಿವ ಜಿ.ಪರಮೇಶ್ವರ್ ಪ್ರತಿಕ್ರಿಯಿಸಿ, ''ಖಂಡಿತವಾಗಿಯೂ ಇಂತಹ ಘಟನೆಗಳು ನಡೆಯಬಾರದು. ಮಕ್ಕಳನ್ನು ಈ ರೀತಿಯ ಕೆಲಸಕ್ಕೆ ಬಳಸುವಂತಿಲ್ಲ. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಕುರಿತಂತೆ ಆದೇಶ ಹೊರಡಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಯಾರು ಈ ಕೆಲಸ ಮಾಡಿದ್ದಾರೆಂದು ತನಿಖೆ ನಡೆಸಿ, ಕ್ರಮ ಜರುಗಿಸುತ್ತೇವೆ'' ಎಂದು ತಿಳಿಸಿದರು.
ಆರ್.ಅಶೋಕ್ ಪ್ರತಿಕ್ರಿಯೆ: ''ಯಶವಂತಪುರ ಕ್ಷೇತ್ರದ ಅಂದ್ರಹಳ್ಳಿಯ ಶಾಲೆಯಲ್ಲಿ ಮಕ್ಕಳ ಕೈಯಲ್ಲಿ ಶೌಚಾಲಯ ಸ್ವಚ್ಛ ಮಾಡಿಸಿರುವ ಘಟನೆ ನಡೆದಿದೆ. ಇದೆಲ್ಲಾ ಕಾಂಗ್ರೆಸ್ ಕಾಲದಲ್ಲಿ ನಡೆಯುತ್ತಿದೆ. ಸರ್ಕಾರ ತಡೆಯುವ ಪ್ರಯತ್ನ ಮಾಡದೆ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತದೆ. ಅಂದ್ರಹಳ್ಳಿ ಶಾಲೆಗೆ ಹೋಗಿ ವಸ್ತುಸ್ಥಿತಿ ನೋಡಿ, ಮಾಹಿತಿ ಪಡೆಯುತ್ತೇನೆ'' ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಇದನ್ನೂ ಓದಿ:ಮಕ್ಕಳನ್ನು ಮಲದ ಗುಂಡಿಗಿಳಿಸಿ ಸ್ವಚ್ಚಗೊಳಿಸಿದ ಪ್ರಕರಣ: ವಸತಿ ಶಾಲೆಯ ಪ್ರಾಂಶುಪಾಲೆ ಸೇರಿ ನಾಲ್ವರು ಅಮಾನತು