ಬೆಂಗಳೂರು :ಪರಿಶಿಷ್ಟ ಜಾತಿ, ಪಂಗಡದ ಮಕ್ಕಳಿಗೆ ಶುಲ್ಕ ಪಾವತಿ ಮಾಡಿಲ್ಲ ಎನ್ನುವ ಕಾರಣವೊಡ್ಡಿ ಪರೀಕ್ಷಾ ಪ್ರವೇಶ ಪತ್ರ ನಿರಾಕರಣೆ ಮಾಡುವಂತಿಲ್ಲ ಎಂದು ಕರ್ನಾಟಕ ವಿಧಾನ ಮಂಡಲದ ಅನುಸೂಚಿತ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿ ವೈದ್ಯಕೀಯ ಕಾಲೇಜುಗಳಿಗೆ ತಿಳಿಸಿದೆ. ಈ ಸಂಬಂಧ ಅಧ್ಯಯನ ಮಾಡಲು ಶಾಸಕ ಎಂ.ಪಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ವಿಧಾನ ಮಂಡಲ ಸಮಿತಿ ರಚಿಸಲಾಗಿತ್ತು. ಇದರ ವರದಿಯನ್ನು ಶಾಸಕರು ವಿಧಾನಸಭೆಯಲ್ಲಿಂದು ಮಂಡಿಸಿದರು.
ರಾಜ್ಯದ ಅನೇಕ ವೈದ್ಯ ಕಾಲೇಜುಗಳು ಪ್ರಾರಂಭದಲ್ಲಿ ಶುಲ್ಕ ಕಟ್ಟಿಸಿಕೊಂಡು ಆಮೇಲೆ ಮರುಪಾವತಿ ಮಾಡಲಾಗುತ್ತಿದೆ. ಇದು ತಪ್ಪಬೇಕು. ಪರಿಶಿಷ್ಟ ಜಾತಿ, ಪಂಗಡ ವಿದ್ಯಾರ್ಥಿಗಳಿಂದ ಮುಂಗಡವಾಗಿ ಶುಲ್ಕವನ್ನು ಸಂಗ್ರಹಿಸಬಾರದು ಎಂದು ಸಮಿತಿ ಸೂಚಿಸಿದೆ. ಉನ್ನತ ಶಿಕ್ಷಣ ಕಲಿಯುತ್ತಿರುವ ಪರಿಶಿಷ್ಟ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಅವರ ಖಾತೆಗೆ ನೇರವಾಗಿ ಜಮಾ ಮಾಡುವಂತೆಯೂ ಸಮಿತಿ ನಿರ್ದೇಶಿಸಿದೆ. ಕಾಲೇಜು ಶುಲ್ಕವನ್ನು ಮಾತ್ರ ನೇರವಾಗಿ ಆಯಾ ಕಾಲೇಜುಗಳ ಖಾತೆಗೆ ವರ್ಗಾಯಿಸಬೇಕೆಂದು ಸರ್ಕಾರಕ್ಕೆ ಶಿಫಾರಸು ಮಾಡಿದೆ.
ವೇತನ ಆಯೋಗ ವರದಿ ಜಾರಿಗೆ ಬದ್ಧ- ಸಿಎಂ: ಮಾರ್ಚ್ ಒಳಗೆ ಏಳನೇ ವೇತನ ಆಯೋಗ ವರದಿ ಜಾರಿಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಿದ್ದಾರೆ. ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸುತ್ತಾ, ಪರಿಷ್ಕೃತ ವೇತನವನ್ನು ಮಧ್ಯಂತರ ವರದಿ ಆಧಾರದಲ್ಲಿ ಜಾರಿಗೊಳಿಸುವುದಾಗಿ ಘೋಷಿಸಿದರು. ಈಗಾಗಲೇ ಏಳನೇ ವೇತನ ಆಯೋಗ ರಚನೆ ಮಾಡಿದ್ದೇವೆ. ನಿವೃತ್ತ ಮುಖ್ಯ ಕಾರ್ಯದರ್ಶಿ ದಕ್ಷ ಅಧಿಕಾರಿ ಸುಧಾಕರ್ ಅವರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದೇವೆ. ಇದೇ ವರ್ಷ ಪೇ ಕಮಿಷನ್ ಜಾರಿಗೆ ತರುವ ಬದ್ಧತೆ ಇದೆ ಎಂದು ಸ್ಪಷ್ಟಪಡಿಸಿದರು.