ಕರ್ನಾಟಕ

karnataka

ETV Bharat / state

ಇಂದು ಸುಪ್ರೀಂ ಕೋರ್ಟ್​ನಲ್ಲಿ ಕಾವೇರಿ ಜಲವಿವಾದದ ಅರ್ಜಿ ವಿಚಾರಣೆ - etv bharat kannada

ಕರ್ನಾಟಕ-ತಮಿಳುನಾಡು ರಾಜ್ಯಗಳ ನಡುವಿನ ಕಾವೇರಿ ಜಲವಿವಾದದ ಅರ್ಜಿ ವಿಚಾರಣೆಯನ್ನು ಇಂದು ಸುಪ್ರೀಂ ಕೋರ್ಟ್​ ಕೈಗೆತ್ತಿಕೊಳ್ಳಲಿದೆ.

ಕಾವೇರಿ ಜಲವಿವಾದದ ಅರ್ಜಿ ವಿಚಾರಣೆ
ಕಾವೇರಿ ಜಲವಿವಾದದ ಅರ್ಜಿ ವಿಚಾರಣೆ

By ETV Bharat Karnataka Team

Published : Sep 21, 2023, 10:43 AM IST

ನವದೆಹಲಿ/ಬೆಂಗಳೂರು:ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್​ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್​ಗೆ ಸಲ್ಲಿಸಿರುವ ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಸೆ.​13ರಿಂದ ಅನ್ವಯವಾಗುವಂತೆ 15 ದಿನಗಳ ಕಾಲ ಪ್ರತಿದಿನ ಐದು ಸಾವಿರ ಕ್ಯೂಸೆಕ್​ ನೀರನ್ನು ತಮಿಳುನಾಡಿಗೆ ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಇತ್ತೀಚೆಗೆ ಆದೇಶಿಸಿತ್ತು. ಈ ಆದೇಶವನ್ನು ಮರುಪರಿಶೀಲಿಸಬೇಕು ಎಂದು ಕೋರಿ ಸುಪ್ರೀ ಕೋರ್ಟ್​ ಮೊರೆ ಹೋಗಿರುವ ಕರ್ನಾಟಕ ಬುಧವಾರ ಅರ್ಜಿ ಸಲ್ಲಿಸಿತ್ತು.

ಈ ಅರ್ಜಿಯಲ್ಲಿ, ಮುಂಗಾರು ಕೊರತೆಯಿಂದಾಗಿ ರಾಜ್ಯದ ಅಣೆಕಟ್ಟೆಗಳಲ್ಲಿ ಸರಿಯಾದ ಪ್ರಮಾಣದಲ್ಲಿ ನೀರು ಸಂಗ್ರಹವಾಗಿಲ್ಲ. ಕಾವೇರಿ ಜಲಾನಯನ ಪ್ರದೇಶವೂ ಸೇರಿದಂತೆ ರಾಜ್ಯದೆಲ್ಲೆಡೆ ಮಳೆ ಕೈಕೊಟ್ಟಿದೆ. ನೈಋತ್ಯ ಮಾನ್ಸೂನ್ ಸಂಪೂರ್ಣ ವಿಫಲವಾಗಿದೆ. ಹೀಗಾಗಿ ನೆರೆರಾಜ್ಯ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಾಗುತ್ತಿಲ್ಲ ಎಂದು ಉಲ್ಲೇಖಿಸಲಾಗಿದೆ.

ಜೂನ್ 1 ರಿಂದ ಸೆ. 18 ರವರೆಗೆ ಕರ್ನಾಟಕದ ನಾಲ್ಕು ಜಲಾಶಯಗಳ ಒಳಹರಿವು 110.875 ಟಿಎಂಸಿ ಇದ್ದು, ಕಳೆದ ಮೂವತ್ತು ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಒಳಹರಿವು ಗಣನೀಯವಾಗಿ ಕುಸಿದಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಶೇ 53.42 ರಷ್ಟು ಮಳೆ ಕೊರತೆ ಉಂಟಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿನ ಪರಿಸ್ಥಿತಿಯನ್ನು ಆಲಿಸಿ ನಾಲ್ಕು ಜಲಾಶಯಗಳ ಒಳಹರಿವಿನ ಆಧಾರದ ಮೇಲೆ ನೀರು ಹಂಚಿಕೆ ನಿರ್ಣಯಿಸಬೇಕು ಎಂದು ಸರ್ಕಾರ ಮನವಿ ಮಾಡಿದೆ.

ಇದಕ್ಕೂ ಮುನ್ನ ದೆಹಲಿಯಲ್ಲಿ ರಾಜ್ಯದ ಕೇಂದ್ರ ಸಚಿವರು, ಸರ್ವಪಕ್ಷಗಳ ಸಂಸತ್ ಸದಸ್ಯರ ಸಮ್ಮುಖದಲ್ಲಿ ಬುಧವಾರ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದ್ದರು. ಕುಡಿಯುವ ನೀರಿಗೆ 33 ಟಿಎಂಸಿ, ಬೆಳೆ ರಕ್ಷಣೆಗೆ 70 ಟಿಎಂಸಿ, ಕೈಗಾರಿಕೆಗಳಿಗೆ 3 ಟಿಎಂಸಿ ಸೇರಿ ಒಟ್ಟು 106 ಟಿಎಂಸಿ ನೀರಿನ ಅನಿವಾರ್ಯತೆ ಇದೆ. ಈಗ ನಮ್ಮ ಬಳಿ ಇರುವುದು 53 ಟಿಎಂಸಿ ನೀರು ಮಾತ್ರ. ಹೀಗಾಗಿ ತಮಿಳುನಾಡಿಗೆ ಬಿಡಲು ನೀರೇ ಇಲ್ಲ ಎಂದು ಸಿದ್ದರಾಮಯ್ಯ ಸಭೆಗೆ ವಿವರಿಸಿದ್ದರು. ಸದ್ಯ ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ 195 ತಾಲ್ಲೂಕುಗಳನ್ನು ಸರ್ಕಾರ 'ಬರಪೀಡಿತ' ಎಂದು ಗುರುತಿಸಿ ಘೋಷಿಸಿದೆ.

ಇದನ್ನೂ ಓದಿ:15 ದಿನಗಳವರೆಗೆ ಮಲಪ್ರಭಾ ಕುಡಿಯುವ ನೀರು ಬಿಡುಗಡೆಗೆ ನಿರ್ಧಾರ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​

ABOUT THE AUTHOR

...view details