ಬೆಂಗಳೂರು:ರಾಜ್ಯದಲ್ಲಿ SC/ST ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಶಿಕ್ಷೆಯ ಪ್ರಮಾಣ ಕಡಿಮೆಯಾಗುತ್ತಿದೆ. ದೋಷಾರೋಪ ಪಟ್ಟಿ ಸಲ್ಲಿಕೆಯಾದ ಬಳಿಕ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲೇ ಸಾವಿರಾರು ಪ್ರಕರಣಗಳು ಇತ್ಯರ್ಥವಾಗದೇ ವಿಳಂಬವಾಗುತ್ತಿವೆ.
ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ತಡೆಯಲು ಹಾಗೂ ಅವರ ಹಕ್ಕುಗಳ ರಕ್ಷಣೆಗೆ ಕಾಯಿದೆ ಹಾಗೂ ನಿಯಮ ಜಾರಿಗೆ ತರಲಾಗಿದೆ. ದೌರ್ಜನ್ಯ ಪ್ರತಿಬಂಧ ಕಾಯ್ದೆ 1989 (ತಿದ್ದುಪಡಿ ಕಾಯ್ದೆ 2015) ಮತ್ತು ನಿಯಮಗಳು 1995 (ತಿದ್ದುಪಡಿ ನಿಯಮಗಳು 2016) ಜಾರಿಯಲ್ಲಿದೆ. ಆದರೆ, ಸರಕಾರ ನಿಯಮಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡದ ಪರಿಣಾಮ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಹಾಗಾಗಿ, ಕಾಯಿದೆಯ ಪರಿಣಾಮಕಾರಿ ಜಾರಿಗೆ ಅಗತ್ಯ ಕ್ರಮ ಜರುಗಿಸುವಂತೆ ಕೂಗು ಕೇಳಿ ಬರುತ್ತಲೇ ಇದೆ.
ಈ ಸಂಬಂಧ ರಾಜ್ಯಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿಯನ್ನು ಮಾಡಲಾಗಿದ್ದು, ಪ್ರಕರಣಗಳ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಲಾಗುತ್ತಿದೆ. ಆದರೂ ರಾಜ್ಯದಲ್ಲಿ ಎಸ್ಸಿ/ಎಸ್ಟಿ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಲೇ ಇವೆ. ಅದರ ಜೊತೆಗೆ ದೋಷಾರೋಪ ಪಟ್ಟಿ ಸಲ್ಲಿಸಿದ ಬಳಿಕವೂ ಕೋರ್ಟ್ಗಳಲ್ಲಿ ವಿಚಾರಣಾ ಹಂತದಲ್ಲೇ ಸಾವಿರಾರು ಪ್ರಕರಣಗಳು ಬಾಕಿ ಉಳಿದಿವೆ.
ರಾಜ್ಯದಲ್ಲಿ ದಾಖಲಾದ ದೌರ್ಜನ್ಯ ಪ್ರಕರಣಗಳೆಷ್ಟು?
ರಾಜ್ಯದಲ್ಲಿ ವರ್ಷಂಪ್ರತಿ ಎಸ್ಸಿ/ಎಸ್ಟಿ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಲೇ ಇವೆ. ಅದಕ್ಕಿಂತ ಹೆಚ್ಚಾಗಿ ಪ್ರಕರಣ ಸಂಬಂಧ ಶಿಕ್ಷೆ ಪ್ರಮಾಣವೂ ಕಡಿಮೆಯಾಗುತ್ತಿದೆ. ಕಾನೂನು ಇಲಾಖೆ ನೀಡಿದ ಅಂಕಿ - ಅಂಶದ ಪ್ರಕಾರ, ರಾಜ್ಯದಲ್ಲಿ 2020-21ನೇ ಸಾಲಿನಲ್ಲಿ ಜುಲೈ ಅಂತ್ಯದವರೆಗೆ ಸುಮಾರು 901 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಎಸ್ಸಿ ಮೇಲಿನ ದೌರ್ಜನ್ಯ ಪ್ರಕರಣ 729, ಎಸ್ಟಿ ಮೇಲಿನ ದೌರ್ಜನ್ಯ ಪ್ರಕರಣ 172. ಈ ಹಿಂದಿನ ವರ್ಷಗಳ ಪ್ರಕರಣಗಳೂ ಸೇರಿ ಈ ವರ್ಷ ಜುಲೈ ಅಂತ್ಯದವರೆಗೆ ಸುಮಾರು 1069 ಎಸ್ಸಿ ಹಾಗೂ ಎಸ್ಟಿ ದೌರ್ಜನ್ಯ ಪ್ರಕರಣಗಳು ರಾಜ್ಯದಲ್ಲಿ ದಾಖಲಾಗಿವೆ.