ಕರ್ನಾಟಕ

karnataka

ETV Bharat / state

ಕಾವೇರಿ ನೀರು ವಿಚಾರದಲ್ಲಿ ಸುಪ್ರೀಂ ವಾಸ್ತವ ಆಧಾರದಲ್ಲಿ ತೀರ್ಪು ನೀಡಬೇಕು: ಬಸವರಾಜ ಬೊಮ್ಮಾಯಿ - ಸುಪ್ರೀಂ ಕೋರ್ಟ್

ಕರ್ನಾಟಕದ ವಸ್ತುಸ್ಥಿತಿಯನ್ನು ರಾಜ್ಯ ಸರ್ಕಾರ ಕೋರ್ಟ್​ಗೆ ಮನವರಿಕೆ ಮಾಡಿಕೊಡಬೇಕಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

Former CM Basavaraj Bommai
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

By ETV Bharat Karnataka Team

Published : Sep 21, 2023, 5:04 PM IST

Updated : Sep 21, 2023, 6:54 PM IST

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಸಂಪೂರ್ಣ ಸಿಡಬ್ಲ್ಯೂಎಂಎ ಆದೇಶವನ್ನು ಪರಿಗಣಿಸದೇ, ವಾಸ್ತವದ ಆಧಾರದಲ್ಲಿ ತೀರ್ಪು ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಆರ್.ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತು ಕಾವೇರಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಎರಡು ರಾಜ್ಯಗಳ ವಾದ ಕೇಳಿ ಸಿಡಬ್ಲ್ಯೂಎಂಎ ಆದೇಶ ಎತ್ತಿ ಹಿಡಿದಿದೆ. ಮುಂದಿನ 15 ದಿನ ಸಿಡಬ್ಲ್ಯೂಎಂಎ ಆದೇಶ ಪಾಲನೆ ಮಾಡಬೇಕು ಅಂತ ಹೇಳಿರುವುದು ದುರಾದೃಷ್ಟ. ಮತ್ತೊಮ್ಮೆ ಕರ್ನಾಟಕದ ವಸ್ತು ಸ್ಥಿತಿಯನ್ನು ಸುಪ್ರೀಂ ಕೋರ್ಟ್​ಗೆ ಮನವರಿಕೆ ಮಾಡಬೇಕಿದೆ. ಸಿಡಬ್ಲ್ಯೂಎಂಎ ಆದೇಶ ಅಂತಿಮವಲ್ಲ. ಕೇವಲ ಕರ್ನಾಟಕದ ಡ್ಯಾಮ್​ಗಳ ನೀರಿನ ಮಟ್ಟ ಲೆಕ್ಕ ಹಾಕುವುದಲ್ಲ. ತಮಿಳುನಾಡು ಡ್ಯಾಮ್​ಗಳಲ್ಲಿನ ನೀರಿನ ಮಟ್ಟ ಲೆಕ್ಕ ಹಾಕಬೇಕು ಎಂದು ಆಗ್ರಹಿಸಿದರು.

ಸಿಡಬ್ಲ್ಯೂಎಂಎ ಮೊದಲ ಆದೇಶ ಬಂದಾಗಲೇ ರಾಜ್ಯ ಸರ್ಕಾರ ಸುಪ್ರೀಂ ‌ಕೋರ್ಟ್ ಮುಂದೆ ಮೆಲ್ಮನವಿ ಸಲ್ಲಿಸಬೇಕಿತ್ತು. ಸರ್ಕಾರ ಎರಡು ಬಾರಿ ನೀರು ಬಿಟ್ಟು, ಈಗ ಸುಪ್ರೀಂ ಕೊರ್ಟ್ ಮುಂದೆ ಹೋಗಿದ್ದಾರೆ. ಸುಪ್ರೀಂ ಕೋರ್ಟ್ ಸಂಪೂರ್ಣವಾಗಿ ಸಿಡಬ್ಲ್ಯೂಎಂಎ ಮೇಲೆ ಅವಲಂಬನೆ ಆಗಿದೆ. ಸಿಡಬ್ಲ್ಯೂಆರ್​ಸಿ , ಸಿಡಬ್ಲ್ಯೂಎಂಎ ಎರಡೂ ಧೋರಣೆ ಸರಿಯಿಲ್ಲ. ಸಿಡಬ್ಲ್ಯೂಎಂಎ ಇಲ್ಲಿನ ವಾಸ್ತವ ಪರಿಸ್ಥಿತಿಯನ್ನು ನೋಡಬೇಕು. ಕೇವಲ ಅಂಕಿ ಅಂಶಗಳನ್ನು ಇಟ್ಟುಕೊಂಡು ಆದೇಶ ಮಾಡುತ್ತಿವೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್​ನಲ್ಲಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುವುದಾಗಿ ಹೇಳುತ್ತಾರೆ. ತಮಿಳುನಾಡು ಈಗಾಗಲೇ ಅಕ್ರಮವಾಗಿ ನೀರು ಬಳಕೆ ಮಾಡಿಕೊಂಡಿದೆ. ಅದನ್ನು ಸುಪ್ರೀಂಕೋರ್ಟ್ ಗಮನಕ್ಕೆ ತರಬೇಕು. ರಾಜ್ಯ ಸರ್ಕಾರ ಕೇವಲ ನಮ್ಮಲ್ಲಿ ನೀರಿಲ್ಲ ಅಂತ ಹೇಳುವುದಷ್ಟೇ ಅಲ್ಲ. ಬೆಂಗಳೂರು ಒಂದು ಅಂತಾರಾಷ್ಟ್ರೀಯ ನಗರ, ಇಲ್ಲಿ ಎಲ್ಲ ಭಾಗದ ಜನರು ಬರುತ್ತಾರೆ. ಬೆಂಗಳೂರಿಗೆ ಕುಡಿಯಲು ಪ್ರತ್ಯೇಕವಾಗಿ ನೀರು ಇಟ್ಟಿದ್ದಾರೆ. ಅದನ್ನು ಸುಪ್ರೀಂ ಕೋರ್ಟ್ ಮುಂದೆ ವಾದ ಮಾಡಬೇಕು. ತಮಿಳುನಾಡಿಗೆ ನವೆಂಬರ್​ನಲ್ಲಿ ಮತ್ತೊಂದು ಹಿಂಗಾರು ಮಳೆ ಬರುತ್ತದೆ. ಆದರೆ, ಕರ್ನಾಟಕಕ್ಕೆ ಮುಂಗಾರು ಮುಗಿಯುವ ಹಂತದಲ್ಲಿದೆ. ಇದೆಲ್ಲವನ್ನು ಸುಪ್ರೀಂ ಕೋರ್ಟ್​ಗೆ ಮನವರಿಕೆ ಮಾಡಿಕೊಡಬೇಕು. ಕುಡಿಯುವ ನೀರಿಗಾದರು ಉಳಿಸಿಕೊಳ್ಳಲು ರಾಜ್ಯ ಸರ್ಕಾರ ಹೋರಾಟ ಮಾಡಬೇಕು. ಇದರಲ್ಲಿ ನಮಗೆ ರಾಜಕಾರಣ ಮಾಡಲು ಇಷ್ಟ ಇಲ್ಲ. ಈಗಾಗಲೇ ರೈತರ ಬೆಳೆ ಒಣಗಿ ಹೋಗುತ್ತಿದೆ. ರಾಜ್ಯ ಸರ್ಕಾರ ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಕಾವೇರಿ ವಿಚಾರದಲ್ಲಿ ಬಿಜೆಪಿಯಿಂದ ಬೀದಿಗಿಳಿದು ಹೋರಾಟ: ಕಾವೇರಿ ವಿಚಾರದಲ್ಲಿ ಬಿಜೆಪಿ ಬೀದಿಗಿಳಿದು ಹೋರಾಟ ಮಾಡಲಿದೆ. ಕಾಂಗ್ರೆಸ್ಸಿನವರು ಜನರಿಗೆ ಮೋಸ ಮಾಡುತ್ತಿರುವುದನ್ನು ಜನರ ಮುಂದಿಡಲಾಗುವುದು ಎಂದು ಮಾಜಿ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟ್ರಿಬ್ಯೂನಲ್‍ನಲ್ಲಿ ಕಾಟಾಚಾರಕ್ಕೆ, ಬೂಟಾಟಿಕೆಗಾಗಿ ವಾದ ಮಂಡಿಸಿದ್ದಾರೆ. ಇದೇ ರೀತಿಯಾದರೆ ರಾಜ್ಯದಲ್ಲಿ ಗೊಂದಲ, ಗಲಾಟೆ ಆದರೆ, ಈ ಸರ್ಕಾರವೇ ನೇರ ಕಾರಣ ಎಂದು ಎಚ್ಚರಿಸಿದರು. ಮೇಲ್ಮನವಿ, ಕೇಂದ್ರಕ್ಕೆ ನಿಯೋಗದ ವಿಚಾರದ ಸಂದರ್ಭದ ಆಯ್ಕೆಯಲ್ಲೂ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದರು.

ಫಾಲೋ ಸ್ಟಾಲಿನ್ ಎಂಬ ಸ್ಥಿತಿ ರಾಜ್ಯ ಸರ್ಕಾರದ್ದು. ನಿಮಗೆ ಮೇಲ್ಮನವಿ ಸಲ್ಲಿಸಲು ಆಗುವುದಿಲ್ಲವೇ? ಎಂದು ಕೇಳಿದರು. 3 ತಿಂಗಳು ಆಡಳಿತದಲ್ಲಿ ಸನ್ಮಾನ- ಸಮಾರಂಭವೇ ನಡೆದಿದೆ. ನ್ಯಾಯಾಂಗದಲ್ಲಿ ಸಮರ್ಥ ವಾದ ಮಂಡಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಆರ್​ ಅಶೋಕ್​ ಆರೋಪಿಸಿದರು.

ಈಗಿನ ಸ್ಥಿತಿ ಗಮನಿಸಿದರೆ ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ಕುಡಿಯುವ ನೀರು ಸಿಗುವುದು ಕಷ್ಟ. ಇವರಿಗೆ ಆ ಪ್ರಜ್ಞೆಯೇ ಇಲ್ಲ. ಇವರಿಗೆ ಸಂಸತ್ತಿನ ಚುನಾವಣೆಯಲ್ಲಿ ಸ್ಟಾಲಿನ್ ಅವರ ಸಹಕಾರ ಬೇಕಿದೆ. ಕರ್ನಾಟಕದ ಒಳಿತಿಗಾಗಿ ಸ್ಟಾಲಿನ್ ಜೊತೆ ಮಾತುಕತೆ, ವಾದ ವಿವಾದ ಮಾಡಬೇಕಿತ್ತು. ಸಿಎಂ, ಡಿಸಿಎಂ ಅವರು ಸ್ಟಾಲಿನ್ ವಿರುದ್ಧ ಇವರು ಒಂದಾದರೂ ಹೇಳಿಕೆ ಕೊಟ್ಟಿದ್ದಾರಾ?. ಇದು ಪಕ್ಕಾ ಒಳ ಒಪ್ಪಂದ. ಕಾವೇರಿ ಜನರ ಬಗ್ಗೆ ಕಳಕಳಿ, ಪ್ರೀತಿ ಇದ್ದರೆ ಸ್ಟಾಲಿನ್‍ರನ್ನು ಎದುರು ಹಾಕಿಕೊಳ್ಳಬೇಕಿತ್ತು. ಅವರಿಗೆ ಛೀಮಾರಿ ಹಾಕಬೇಕಿತ್ತು. ನೀರಾವರಿ ತಜ್ಞರನ್ನು ಭೇಟಿ ಮಾಡಬೇಕಿತ್ತು. ನಿವೃತ್ತ ಐಎಎಸ್ ಅಧಿಕಾರಿಗಳನ್ನು ಕೇಳಬೇಕಿತ್ತು. ಸ್ಟಾಲಿನ್ ನಮ್ಮ ಬಂಧು, ಅಣ್ಣ ಎಂಬ ಚಿಂತನೆಯೇ ನಮ್ಮ ರಾಜ್ಯದ ವಿಫಲತೆಗೆ ಕಾರಣ ಎಂದು ಟೀಕಿಸಿದರು.

ಕಾವೇರಿ ವಿಚಾರದಲ್ಲಿ ಕರ್ನಾಟಕದ ಸರ್ಕಾರ, ಅದರಲ್ಲೂ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಜನತೆಗೆ ಮೋಸ ಮಾಡಿದ್ದಾರೆ. ತಮಿಳುನಾಡನ್ನು ಸೋನಿಯಾ ಗಾಂಧಿ ಪರವಾಗಿ ಓಲೈಸಲು, ಸೋನಿಯಾ ಗಾಂಧಿಯವರ ಚಿತಾವಣೆಯಿಂದ ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದ ರೈತರಿಗೆ ಮತ್ತು ಬೆಂಗಳೂರಿನ ಕುಡಿಯುವ ನೀರಿಗಾಗಿ ಅವಲಂಬಿತ ಜನರಿಗೆ ಅನ್ಯಾಯ ಮಾಡುತ್ತಿದೆ. ಬೆಲೆ ಏರಿಕೆ, ಶುಲ್ಕಗಳ ಹೆಚ್ಚಳ ಮಾಡಿದೆ ಎಂದು ಹರಿಹಾಯ್ದರು.

ಬೇಡಿಕೆ ಇಡುವ ಮೊದಲೇ ನೀರು ಬಿಟ್ಟಿದ್ದೇಕೆ?: ತಮಿಳುನಾಡಿಗೆ ಮುಂಚಿತವಾಗಿಯೇ ನೀರು ಬಿಡಲು ನಿಮಗೇನಾದರೂ ಬೆದರಿಕೆ ಇತ್ತೇ? ಪಾರ್ಟಿಯಿಂದ ಒತ್ತಡ ಇತ್ತೇ? ಬೇಡಿಕೆ ಇಡುವ ಮೊದಲೇ ನೀರು ಬಿಟ್ಟಿದ್ದೇಕೆ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಪ್ರಶ್ನಿಸಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಡಿಯಾ ಮೈತ್ರಿಕೂಟದ ಭಾಗವಾಗಲು ನೀರು ಬಿಡಿ ಎಂದು ಡಿಎಂಕೆ ಬೆದರಿಕೆ ಹಾಕಿರಬಹುದು. ಇಲ್ಲವೇ ಕಾಂಗ್ರೆಸ್ ಹೈಕಮಾಂಡ್ ಒತ್ತಡ ಹಾಕಿರಬಹುದು ಎಂದು ಸಂಶಯ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರ್ಕಾರವು ಕಾವೇರಿ ನೀರಿನ ವಿಷಯದಲ್ಲಿ ಆರಂಭದಿಂದಲೂ ಅನುಮಾನಾಸ್ಪದವಾಗಿ ನಡೆದುಕೊಂಡಿದೆ. ಅದರ ಪರಿಣಾಮವಾಗಿ ನಮ್ಮ ವಿರುದ್ಧ ತೀರ್ಪು ಬಂದಿದೆ. ವಾಸ್ತವಿಕ ಸ್ಥಿತಿಯನ್ನು ಸುಪ್ರೀಂ ಕೋರ್ಟ್, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮನವರಿಕೆ ಮಾಡಿಕೊಡುವಲ್ಲಿ ನಾವು ವಿಫಲವಾಗಿದ್ದೇವೆ. ಕಾವೇರಿ ನೀರಿನ ವಿಚಾರದಲ್ಲಿ ಕರ್ನಾಟಕದ ಕಾಂಗ್ರೆಸ್ ಸರಕಾರ ತಮಿಳುನಾಡು ಬೇಡಿಕೆ ಮುಂದಿಡುವುದಕ್ಕಿಂತ ಮುಂಚಿತವಾಗಿಯೇ ನೀರು ಬಿಡುವ ಮೂಲಕ ತಮ್ಮ ಉದಾರತೆಯನ್ನು ಪ್ರದರ್ಶನ ಮಾಡಿತ್ತು. ಅದರ ಪರಿಣಾಮವಾಗಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಶೇ 42ರಷ್ಟು ನೀರಿನ ಕೊರತೆ ಇದ್ದರೂ ನೀರು ಬಿಟ್ಟಿದ್ದಾರೆ ಎಂದರು.

ಕೆಆರ್​ಎಸ್, ಕಬಿನಿ ಮತ್ತಿತರ ಡ್ಯಾಂಗಳು ಖಾಲಿಯಾಗಿವೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನಮ್ಮ ನೆರವಿಗೆ ಬರಲಿಲ್ಲ. ಸುಪ್ರೀಂ ಕೋರ್ಟಿನಲ್ಲಿ ನಮಗೆ ಸಹಾಯ ಆಗಬಹುದು ಎಂದುಕೊಂಡಿದ್ದರೂ ಸಹಾಯ ಆಗಿಲ್ಲ. ಮತ್ತೆ 15 ದಿನ ನೀರು ಬಿಡಲು ಸೂಚಿಸಿದ್ದಾರೆ. ರೈತರು ಸಿಡಿದೆದ್ದಿದ್ದಾರೆ. ಎಲ್ಲ ರೀತಿಯ ಸಂಕಷ್ಟವನ್ನು ಎದುರಿಸಬೇಕಾದ ಪರಿಸ್ಥಿತಿ ನಮ್ಮ ಮುಂದಿದೆ ಎಂದು ಅವರು ಎಚ್ಚರಿಸಿದರು.

ಇದನ್ನೂ ಓದಿ :Cauvery water issue: ಕಾವೇರಿ ನಿರ್ವಹಣಾ ಮಂಡಳಿ, ಪ್ರಾಧಿಕಾರ ರದ್ದುಗೊಳಿಸಿ ಸ್ವತಂತ್ರ ಸಮಿತಿ ರಚಿಸಿ: ಕುರುಬೂರು ಶಾಂತಕುಮಾರ್

Last Updated : Sep 21, 2023, 6:54 PM IST

ABOUT THE AUTHOR

...view details