ಬೆಂಗಳೂರು: ಸ್ಪೀಕರ್ ಹುದ್ದೆಯ ಕುರಿತುಸಚಿವ ಜಮೀರ್ ಅಹ್ಮದ್ ಹೇಳಿಕೆ ಖಂಡಿಸಿ ಮತ್ತು ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಲು ಒತ್ತಾಯಿಸಿ ಎಸ್‍ಸಿ ಮೋರ್ಚಾ ವತಿಯಿಂದ ಪ್ರತಿ ಜಿಲ್ಲೆಯಲ್ಲೂ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯ ಎಸ್‍ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ 'ಜಗನ್ನಾಥ ಭವನ'ದಲ್ಲಿ ಮಾತನಾಡಿದ ಅವರು, ಡಿಸೆಂಬರ್ 2, 3 ಅಥವಾ ಸದನ ನಡೆಯುವಾಗಲೇ 4ರಂದು ಪ್ರತಿಭಟನೆ ಮಾಡಲು ನಿರ್ಧರಿಸಿದ್ದೇವೆ. ಜಮೀರ್ ಅಹ್ಮದ್ ಮಂತ್ರಿಯಾಗಿ ಮುಂದುವರಿಯಲು ಯೋಗ್ಯರಲ್ಲ. ಆ ಕಾರಣದಿಂದ ಅವರು ಬೆಳಗಾವಿಯಲ್ಲಿ ನಡೆಯುವ ಸದನಕ್ಕೆ ಹಾಜರಾಗಬಾರದು ಎಂದು ಆಗ್ರಹಿಸಿದರು.
ಡಾ.ಅಂಬೇಡ್ಕರ್ ಅವರ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಕಪ್ಪುಚುಕ್ಕಿ ಇಡುವ ರೀತಿಯಲ್ಲಿ ಜಮೀರ್ ಅಹ್ಮದ್ ಮಾತನಾಡಿದ್ದಾರೆ. ಇದನ್ನು ಇಂದಿನ ಎಸ್‍ಸಿ ಮೋರ್ಚಾ ರಾಜ್ಯ ವಿಶೇಷ ಸಭೆ ಖಂಡಿಸಿದೆ. ಸ್ಪೀಕರ್ ಎಂಬುದು ಸಾಂವಿಧಾನಿಕ ಸ್ಥಾನ. ಆ ಸ್ಥಾನಕ್ಕೆ ಪ್ರತಿಯೊಬ್ಬರೂ ಗೌರವ ಕೊಡಬೇಕಾಗುತ್ತದೆ. ಅದು ವ್ಯಕ್ತಿಗೆ ಕೊಡುವ ಗೌರವವಲ್ಲ. ಜಮೀರ್ ಈ ಸ್ಥಾನವನ್ನು ಧರ್ಮಕ್ಕೆ ಅಂಟಿಸಿದ್ದಾರೆ ಎಂದರು.
ಕಾಂತರಾಜು ಆಯೋಗದ ವರದಿ ನೀಡುವಾಗ ಎಲ್ಲರ ಮನೆಗಳಿಗೆ ತೆರಳಿ ಮಾಹಿತಿ ಸಂಗ್ರಹಿಸಿಲ್ಲ. ಅದು ಜಾತಿಗಣತಿ ಅಲ್ಲ. ಜಾತಿಗಣತಿ ಮಾಡಲು ಸೆನ್ಸಸ್ ಡಿಪಾರ್ಟ್‍ಮೆಂಟ್ ಹೊರತುಪಡಿಸಿ ಬೇರೆ ಯಾರಿಗೂ ಅಧಿಕಾರ ಇಲ್ಲ. ಅದು ಸಮೀಕ್ಷೆ ಮಾತ್ರ. ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆದಿದ್ದರೆ ಅದಕ್ಕೆ ಮೌಲ್ಯವಿದೆ. ಆದರೆ, ಎಲ್ಲರ ವಿರೋಧದ ಮಧ್ಯದಲ್ಲಿ ಇಂಥ ವರದಿ ಬೇಕಿಲ್ಲ. ಎಲ್ಲರೂ ಒಪ್ಪುವ, ಮೆಚ್ಚುವ ರೀತಿಯಲ್ಲಿ ವರದಿ ಬಂದರೆ ನಮ್ಮ ಅಭ್ಯಂತರವಿಲ್ಲ. ಬಿಜೆಪಿ ಅದರ ವಿರೋಧ ಇದೆ ಎಂದಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
ಕಾಂತರಾಜು ವರದಿ ಕಳ್ಳತನ ಆಗಿದ್ದರೆ ಯಾರು ಕಳ್ಳರು? ಕಳ್ಳರನ್ನು ಯಾರು ಹಿಡಿಯಬೇಕು? ಮೊದಲು ಅವರನ್ನು ಹಿಡಿಯಲಿ ಎಂದು ಆಗ್ರಹಿಸಿದರು. ಮೊದಲು ವರದಿ ಕೊಡಲು ಬಂದಾಗ ಬೇಡ ಎಂದು ಸಿದ್ದರಾಮಯ್ಯ ಹೇಳಿದ್ದರು. ಈಗ ಮೂಲ ಪ್ರತಿ ಕಳವಾದ ಬಗ್ಗೆ ಜಯಪ್ರಕಾಶ್ ಹೆಗ್ಡೆ ಅವರು ತಿಳಿಸಿದ್ದಾರೆ. ಕಳ್ಳರು ಯಾರು? ಸಿದ್ದರಾಮಯ್ಯನವರೇ? ಡಿ.ಕೆ.ಶಿವಕುಮಾರರೇ ಎಂದು ಪ್ರಶ್ನೆ ಕೇಳಿದರು.
ಮೊದಲು ಕಳ್ಳನನ್ನು ಹುಡುಕಿ ಕೊಡಿ ಎಂದು ಆಗ್ರಹಿಸಿದರು. ಇದು ಜಾತಿ ಗಣತಿಯಲ್ಲ. ಇದು ಜಾತಿ ಜಾತಿಗಳ ನಡುವಿನ ಕಿತಾಪತಿ. ಇದನ್ನು ಸದ್ಯಕ್ಕೆ ಕೈಬಿಡಿ. ಎಲ್ಲರನ್ನೂ ಗಣನೆಗೆ ತೆಗೆದುಕೊಂಡು ಸರಿದೂಗಿಸಬೇಕು. ಸರ್ವಪಕ್ಷಗಳ ಸಭೆ ನಡೆಸಿ ತೀರ್ಮಾನ ಕೈಗೊಳ್ಳಿ ಎಂದು ಸಲಹೆ ನೀಡಿದರು.
ಇದನ್ನೂ ಓದಿ:ಜಮೀರ್ ಅಹ್ಮದ್ಗೆ ರಸ್ತೆಯಲ್ಲಿ ಓಡಾಡಲು ಬಿಟ್ಟಿದ್ದೇ ನಮ್ಮ ಅಪರಾಧ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ