ಬೆಂಗಳೂರು:ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಪೇಸಿಎಂ ಅಭಿಯಾನ ನಡೆಸಿ ಯಶಸ್ವಿಯಾಗಿರುವ ಕಾಂಗ್ರೆಸ್ ಪಕ್ಷ ಇದೀಗ ಸೇ-ಸಿಎಂ ಹೆಸರಿನಲ್ಲಿ ಹೊಸ ಅಭಿಯಾನ ಆರಂಭಿಸಿದೆ.
ಬಿಜೆಪಿ ವಿರುದ್ಧ ಮತ್ತೊಂದು ಅಭಿಯಾನ ಶುರು ಮಾಡಿದ ಕಾಂಗ್ರೆಸ್, ಹಗರಣಗಳ ತಲೆಗಳು, ಅಹಂಕಾರದ ಮುಖಗಳು ಪ್ರಶ್ನೆಗಳಿಗೆ ಉತ್ತರಿಸದ ಹೇಡಿಗಳು. ಒಂದು ಉತ್ತರಕ್ಕೆ ಇನ್ನೆಷ್ಟು ಪ್ರಶ್ನೆಗಳು ಬೇಕು? 50 ಪ್ರಶ್ನೆಗಳಿಗೆ ಉತ್ತರಿಸಲಾಗದ ನಿಮಗೆ 550 ಪ್ರಶ್ನೆಗಳ ಉತ್ತರಿಸುವ ತಾಕತ್ತಿದೆಯಾ? ಎಂದು ಅಭಿಯಾನದಲ್ಲಿ ಕೇಳಿದೆ.
ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ ಇಂದು ಬೆಂಗಳೂರಿನ ಕ್ವೀನ್ಸ್ ರಸ್ತೆ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂದರ್ಭದಲ್ಲಿ ಸಹ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸೇ-ಸಿಎಂ ಅಭಿಯಾನ ಕುರಿತು ಸಹ ಪ್ರಸ್ತಾಪ ಮಾಡಿದ್ದಾರೆ.
ನಿಮ್ಮ ಹತ್ತಿರ ಇದೆಯಾ ಎಂಬ ಟ್ಯಾಗ್ಲೈನ್ ಅಡಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಪೂರೈಸಲು ಸಮಿತಿ ರಚಿಸಿ, ಪರಿಹಾರ ಒದಗಿಸುತ್ತೇವೆ ಎಂದಿತ್ತು ಬಿಜೆಪಿ. ಅವರು ಬೀದಿಗಿಳಿದು ವಾರಗಟ್ಟಲೆ ಹೋರಾಟ ಮಾಡಿದ್ದರು. ಅವರ ಗೋಳು ಕೇಳಲು ಯಾವ ಸಮಿತಿಯೂ ಬರಲಿಲ್ಲ. ಯಾವ ಸಚಿವರೂ ಕೇಳಲಿಲ್ಲ. ಸಮಿತಿ ರಚನೆಗೆ ಇನ್ನೂ ಮುಹೂರ್ತ ಕೂಡಿ ಬರಲಿಲ್ಲವೇ ರಾಜ್ಯ ಬಿಜೆಪಿ? ಎಂದು ಕೇಳಿದೆ.
ಬಿಜೆಪಿಯವರು ಸುಳ್ಳಿನ ಸಾಮ್ರಾಟರು: ಬಿಜೆಪಿಯಲ್ಲಿರುವುದು ಅರ್ಧ ಭ್ರಷ್ಟರು, ಇನ್ನರ್ಧ ಪುಕ್ಕಲುಗಳು! ಅಹಂಕಾರ, ಭ್ರಷ್ಟಾಚಾರಗಳನ್ನು ಮೈಗೂಡಿಸಿಕೊಂಡಿರುವ ಈ ಸರ್ಕಾರದ ಸಚಿವರುಗಳಿಗೆ ತಮ್ಮದೇ ಪ್ರಣಾಳಿಕೆಯ ಭರವಸೆಗಳ ಬಗೆಗಿನ ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯವಿಲ್ಲ. ರಾಜ್ಯ ಬಿಜೆಪಿ ಪಕ್ಷದಲ್ಲಿರುವವರೆಲ್ಲ ಸುಳ್ಳಿನ ಸಾಮ್ರಾಜ್ಯದ ಸಾಮ್ರಾಟರು! ಎಂದಿದೆ.