ಆನೇಕಲ್: ಅವು ಪುಟ್ಟ ಪ್ರಾಯದಲ್ಲಿಯೇ ಹೆತ್ತಮ್ಮನಿಂದ ದೂರವಾಗಿದ್ದ ನತದೃಷ್ಟ ಮರಿಗಳು. ಆದರೆ ತಾಯಿಯ ಪ್ರೀತಿಯ ವಾತ್ಸಲ್ಯ ಸಿಗದೇ ಪರದಾಡುತ್ತಿದ್ದ ತಬ್ಬಲಿಗಳಿಗೆ ಇಲ್ಲೊಂದು ವೈದ್ಯರ ತಂಡ ಆಸರೆಯಾಗಿ 'ಒಳಿತು ಮಾಡು ಮನುಷಾ ನೀ ಇರೋದು ಮೂರು ದಿವಸ' ಅಂತ ಅಮ್ಮನ ಮಡಿಲಿನಿಂದ ದೂರವಾದ ಮರಿಗಳಿಗೆ ಅಮ್ಮನಂತಾಗಿದ್ದಾರೆ ಸಾವಿತ್ರಮ್ಮ.
ಮೈಸೂರು, ಬಿಳಿಗಿರಿರಂಗನಬೆಟ್ಟ, ನರಸೀಪುರ, ಮದ್ದೂರು, ರಾಮನಗರ ಸೇರಿದಂತೆ ನಾನಾ ಕಡೆಗಳಲ್ಲಿ ರೈತರ ಹೊಲಗದ್ದೆಗಳಲ್ಲಿ ತಾಯಿಯಿಂದ ಬೇರ್ಪಟ್ಟು ಅನಾಥವಾಗಿದ್ದ ಒಟ್ಟು 11 ಚಿರತೆ ಮರಿಗಳನ್ನು ರಕ್ಷಣೆ ಮಾಡಿ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಕರೆತರಲಾಗಿತ್ತು. ಬಹುತೇಕ ಚಿರತೆ ಮರಿಗಳು ಜನಿಸಿ ಕೇವಲ ಒಂದು ವಾರವಷ್ಟೇ ಆಗಿತ್ತು. ಈ ಮರಿಗಳು ತಾಯಿ ಹಾಲಿಲ್ಲದೆ ನಿತ್ರಾಣಗೊಂಡಿದ್ದವು. ಇಂತಹ ಸಂದರ್ಭದಲ್ಲಿ ಉದ್ಯಾನವನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯಕೀಯ ಸಿಬ್ಬಂದಿ ಹೆಚ್ಚು ಮುತುವರ್ಜಿ ವಹಿಸಿ ತಾಯಿ ಎದೆ ಹಾಲು ಬದಲಿಗೆ ಕಾಲ ಕಾಲಕ್ಕೆ ಮೇಕೆ ಹಾಲು ಮತ್ತು ಅಗತ್ಯ ವೈದ್ಯಕೀಯ ಸೇವೆ ನೀಡುವ ಮೂಲಕ ಯಶಸ್ವಿಯಾಗಿ ಪೋಷಣೆ ಮಾಡಿ ಕಾಪಾಡಿದ್ದಾರೆ.
ಸದ್ಯ ಮೂರು ತಿಂಗಳು ಪ್ರಾಯದ 11 ಚಿರತೆಗಳನ್ನು ಉದ್ಯಾನವನದ ಪಶು ಆಸ್ಪತ್ರೆಯಲ್ಲಿ ಪಾಲನೆ ಮಾಡಲಾಗುತ್ತಿದೆ. 8 ಚಿರತೆಗಳನ್ನು ಒಂದು ಗುಂಪು, 3 ಚಿರತೆಗಳ ಮತ್ತೊಂದು ಗುಂಪಾಗಿ ಪ್ರತ್ಯೇಕಿಸಿ ಇಡಲಾಗಿದೆ. ಪ್ರಾಯೋಗಿಕ ಪರೀಕ್ಷೆ ಬಳಿಕ ಈಗಾಗಲೇ ಸಿದ್ಧಗೊಳ್ಳುತ್ತಿರುವ ಚಿರತೆ ಸಫಾರಿಯ ಕ್ರಾಲ್ನಲ್ಲಿ ಪ್ರವಾಸಿಗರ ವೀಕ್ಷಣೆಗೆ ಮುಕ್ತಗೊಳಿಸಲಾಗುವುದು ಎಂದು ಉದ್ಯಾನವನದ ವೈದ್ಯಾಧಿಕಾರಿ ಡಾ ಉಮಾಶಂಕರ್ ತಿಳಿಸಿದ್ದಾರೆ.