ಕೆ.ಆರ್.ಪುರ (ಬೆಂಗಳೂರು): ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಕೆ.ಆರ್.ಪುರ ಮಾಜಿ ಶಾಸಕ ಹಾಗೂ ಹಾಲಿ ಬಿಎಂಟಿಸಿ ನಿಗಮದ ಅಧ್ಯಕ್ಷ ನಂದೀಶ್ ರೆಡ್ಡಿ ಅವರು ತಮ್ಮ ಕ್ಷೇತ್ರವಾದ ಕೆ.ಆರ್.ಪುರವನ್ನು ಬಿಟ್ಟುಕೊಡುವಂತೆ ಬಿಜೆಪಿ ಹೈಕಮಾಂಡ್ ಬಳಿ ಪಟ್ಟು ಹಿಡಿದಿದ್ದಾರೆ. ಈ ಮೂಲಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡು ಸಚಿವರಾಗಿರುವ ಬೈರತಿ ಬಸವರಾಜ ಹಾಗೂ ನಂದೀಶ್ ರೆಡ್ಡಿ ನಡುವಿನ ವೈಮನಸ್ಸು ಮತ್ತೊಮ್ಮೆ ಬೆಳಕಿಗೆ ಬಂದಿದೆ. ಕ್ಷೇತ್ರದಲ್ಲಿ ಬಿಜೆಪಿ ಎರಡು ಗುಂಪುಗಳಾಗಿ ವಿಭಜನೆಗೊಂಡಿದ್ದು, ಮುಸುಕಿನ ಗುದ್ದಾಟವೂ ಜೋರಾಗಿದೆ.
ಮುಂಬರುವ ಚುನಾವಣೆಯಲ್ಲಿ ನಂದೀಶ್ ರೆಡ್ಡಿಯವರೇ ಸ್ಪರ್ಧಿಸಬೇಕು. ಸಚಿವ ಬೈರತಿ ಅವರನ್ನು ನಾವು ಬೆಂಬಲಿಸುವುದಿಲ್ಲ ಎಂದು ಮೂಲ ಬಿಜೆಪಿಗರು ಹೇಳುತ್ತಿದ್ದಾರೆ. ಈ ವಿಚಾರದ ಕುರಿತಂತೆ ಭಾನುವಾರ ಬಿಜೆಪಿಗೆ ಸೆಡ್ಡು ಹೊಡೆಯಲು ಸಂಕ್ರಾಂತಿ ಹಬ್ಬದ ಪ್ರಯುಕ್ತ ನೂರಾರು ಕಾರ್ಯಕರ್ತರ ಸಮ್ಮುಖದಲ್ಲಿ ಸಭೆ ಮಾಡಿರುವ ನಂದೀಶ್ ರೆಡ್ಡಿ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ಬಿಜೆಪಿಯ ಮೂಲ ಕಾರ್ಯಕರ್ತರನ್ನು ಉಳಿಸಿಕೊಂಡು, ನಾವು ನಾವಾಗಿ ಕ್ಷೇತ್ರದಲ್ಲಿ ಉಳಿಯೋಣ ಎಂದರು. ಕಾರ್ಯಕರ್ತರ ಮನಸ್ಸಿನಲ್ಲೇನಿದೆಯೋ ಅದನ್ನು ತಿಳಿದುಕೊಂಡು ಅವರ ತೀರ್ಮಾನದಂತೆ ಪಕ್ಷದ ನಾಯಕರು ನಡೆಯಬೇಕು ಎಂದು ಕಿವಿಮಾತು ಹೇಳಿದರು.
ಇದೇ ತಿಂಗಳ 26ರ ವರೆಗೆ ಈ ವಿಚಾರವಾಗಿ ಬಿಜೆಪಿ ನಾಯಕರಿಗೆ ಡೆಡ್‌ಲೈನ್ ಕೊಟ್ಟಿದ್ದೀರಂತೆ ಎಂಬ ಪ್ರಶ್ನೆಗೆ ಉತ್ತರಿಸಿದ ರೆಡ್ಡಿ, ನಾನು ಯಾರಿಗೂ ಡೆಡ್‌ಲೈನ್ ಕೊಟ್ಟಿಲ್ಲ. ಇದೆಲ್ಲ ನಮ್ಮ ಪಕ್ಷದ ನಾಯಕರಿಗೆ ಬಿಟ್ಟಿದ್ದು. ಅವರೇ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.