ಬೆಂಗಳೂರು: ಈ ಬಾರಿಯ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯ ವಿಶೇಷ ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಥೀಮ್, ಬಂದ ಅತಿಥಿಗಳಿಗೆಲ್ಲಾ ಸಾವರ್ಕರ್ ಜೀವನಚರಿತ್ರೆ ತಿಳಿದುಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದಿಯಾಗಿ ಎಲ್ಲರೂ ಸಾವರ್ಕರ್ ಬಗೆಗಿನ ವಿಷಯಗಳನ್ನು ಕುತೂಹಲದಿಂದ ತಿಳಿದು ಕೊಂಡರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯುತ್ತಿರುವ ಅರಮನೆ ಮೈದಾನದಲ್ಲಿ ಅಂಡಮಾನ್ ಜೈಲಿನ ಪ್ರತಿಕೃತಿ ನಿರ್ಮಿಸಲಾಗಿದೆ. ವೀರ ಸಾವರ್ಕರ್ ನೆನಪಿನ ಬುತ್ತಿಯನ್ನು ಅನಾವರಣಗೊಳಿಸಲಾಗಿದೆ. ಜೈಲಿನ ಮುಖ್ಯ ದ್ವಾರ ಪ್ರವೇಶ ಮಾಡುತ್ತಿದ್ದಂತೆ ಎದುರಿಗೆ ಸಾವರ್ಕರ್ ಪ್ರತಿಮೆ ಎದುರಾಗಲಿದೆ. ಪ್ರತಿಮೆಗೆ ಗೌರವ ಸಲ್ಲಿಸಿ ಒಳ ಹೋಗುವ ಮುಖಂಡರು, ನಾಯಕರು, ಕಾರ್ಯಕರ್ತರಿಗೆ ಸಾವರ್ಕರ್ ಜೀವನ ಕಣ್ಣಮುಂದೆ ಬರಲಿದೆ.
ಸಾವರ್ಕರ್ ಬಗ್ಗೆ ವಾಜಪೇಯಿ ಹೇಳಿದ್ದ ಮಾತುಗಳು, ಸಾವರ್ಕರ್ ತಮ್ಮ ಅತ್ತಿಗೆಗೆ ಬರೆದ ಪತ್ರದ ಪ್ರತಿ, ಸಮದ್ರದಲ್ಲಿ ಈಜುತ್ತಾ ಫ್ರಾನ್ಸ್ ದಡ ಸೇರಿದ್ದ ಮಾಹಿತಿಗಳ ಬ್ಯಾನರ್ಗಳನ್ನಾಗಿ ಅಳವಡಿಸಲಾಗಿದೆ. ದಲಿತರಿಗೆ ದೇವಾಲಯ ನಿರ್ಮಾಣ ಸೇರಿದಂತೆ ಸಾವರ್ಕರ್ ನೀಡಿದ್ದ ಕರೆ, ಸಂದೇಶಗಳ ಉಲ್ಲೇಖಗಳ ಪ್ರದರ್ಶನ ವಿಶೇಷವಾಗಿದೆ. ಎರಡು ಜೀವಾವಧಿ ಶಿಕ್ಷೆ ಪಡೆದ ದಾಖಲೆ ಪ್ರತಿ, ಲಂಡನ್ಗೆ ನುಗ್ಗಿ ದಾಳಿ ಮಾಡಿದ್ದನ್ನು ಪ್ರಸ್ತಾಪಿಸಲಾಗಿದೆ.
ಬಿಜೆಪಿ ಕಾರ್ಯಕಾರಿಣಿಯಲ್ಲಿ ಗಮನ ಸೆಳೆದ ಸಾವರ್ಕರ್ ಥೀಮ್ ಪಿವಿ ನರಸಿಂಹರಾವ್ ಪ್ರಧಾನಿ ಆಗಿದ್ದಾಗ ಸಾವರ್ಕರ್ ಜನ್ಮ ಶತಮಾನೋತ್ಸವಕ್ಕೆ ಹೊರಡಿಸಿದ್ದ ಪತ್ರದ ಪ್ರತಿ, ಕೆ.ಆರ್.ನಾರಾಯಣನ್ ಉಪ ರಾಷ್ಟ್ರಪತಿ ಆಗಿದ್ದಾಗ ಹೊರಡಿಸಿದ್ದ ಪ್ರಶಂಸನಾ ಪತ್ರ, ಮೊಳೆಗಳಿಂದಲೇ ಜೈಲುಗೋಡೆ ಮೇಲೆ ಮಹಾಕಾವ್ಯ ರಚನೆ ಮಾಡಿದ್ದನ್ನು ಪ್ರದರ್ಶನ ಮಾಡಲಾಗಿದೆ.
ವಾಜಪೇಯಿ ಪ್ರಧಾನಿ ಆಗಿದ್ದ ವೇಳೆ ಸಂಸತ್ನ ಸೆಂಟ್ರಲ್ ಹಾಲ್ನಲ್ಲಿ ಸಾವರ್ಕರ್ ಫೋಟೋ ಪ್ರತಿಷ್ಠಾಪನೆ ಮಾಡಿದ್ದು, ಆಂಧ್ರಪ್ರದೇಶದ ಮಾಜಿ ಸಿಎಂ ವಜಯ್ ಭಾಸ್ಕರ್ ರೆಡ್ಡಿ ಹೇಳಿಕೆ, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಪತ್ರಗಳು, ಸಾವರ್ಕರ್ ಕುರಿತು ವಿಶೇಷ ಫೋಟೋಗಳು, ಅವರ ಇಡೀ ಜೀವನಕ್ರಮ ಉಲ್ಲೇಖದ ಬೋರ್ಡ್ ಅನ್ನು ಪ್ರದರ್ಶಿಸಿ ಸಾವರ್ಕರ್ ಬಗ್ಗೆ ಸಮಗ್ರ ಮಾಹಿತಿ ನೀಡುವ ಪ್ರಯತ್ನ ಮಾಡಲಾಗಿದೆ. ಇದರ ಜೊತೆ ಸಾವರ್ಕರ್ ಅವರನ್ನು ಇರಿಸಲಾಗಿದ್ದ ಅಂಡಮಾನ್ ಜೈಲುಕೋಣೆಯ ಪ್ರತಿಕೃತಿ ನಿರ್ಮಿಸಿಸಿದ್ದು ಕಾಲಾಪಾನಿಯ ದೃಶ್ಯವೈಭವವನ್ನು ಕಟ್ಟಿಕೊಡಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಬಿಜೆಪಿ ನಾಯಕರು ಅಂಡಮಾನ್ ಜೈಲಿನ ಪ್ರತಿಕೃತಿಯ ಒಳಹೊಕ್ಕು ಸಾವರ್ಕರ್ ಜೀವನದ ಮಾಹಿತಿಯನ್ನು ವೀಕ್ಷಿಸಿದರು.
ಇದನ್ನೂ ಓದಿ :ಓಡಲು ದಾರಿ ಹುಡುಕುವ ಇಟಲಿಯ ಅಕ್ಕ: ಕಾಂಗ್ರೆಸ್ ಅಧಿನಾಯಕಿ ಬಗ್ಗೆ ವ್ಯಂಗ್ಯವಾಡಿದ ನಳಿನ್ ಕುಮಾರ್ ಕಟೀಲ್..!