ಬೆಂಗಳೂರು:ಟಿಕೆಟ್ ನೀಡದ್ದಕ್ಕೆ ಬಿಜೆಪಿ ವಿರುದ್ಧ ಬಂಡೆದ್ದು ಕಾಂಗ್ರೆಸ್ ಸೇರಿದ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಾದ ಲಕ್ಷ್ಮಣ ಸವದಿ ಬೆಳಗಾವಿ ಜಿಲ್ಲೆಯ ಅಥಣಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ವಿರುದ್ಧ ಜಯಭೇರಿ ಸಾಧಿಸಿದ್ದಾರೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಿಎಂ ಜಗದೀಶ ಶೆಟ್ಟರ್ ಸೋಲು ಕಂಡಿದ್ದಾರೆ. ಇಲ್ಲಿ ಬಿಜೆಪಿಯ ಮಹೇಶ್ ಟೆಂಗಿನಕಾಯಿಗೆ ಮತದಾರರು ವಿಜಯಮಾಲೆ ಹಾಕಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ದೇಶದಲ್ಲಿಯೇ ಗಮನ ಸೆಳೆದಿರುವ ಮತ್ತು ಅಖಾಡದಲ್ಲಿ ಜಿದ್ದಾಜಿದ್ದಿಗೆ ಕಾರಣವಾಗಿರುವ 2 ಕ್ಷೇತ್ರಗಳೆಂದರೆ ಹುಬ್ಬಳ್ಳಿ- ಧಾರವಾಡ ಕೇಂದ್ರ ಹಾಗು ಬೆಳಗಾವಿಯ ಅಥಣಿ. ಬಿಜೆಪಿಯ ಕಟ್ಟಾಳುಗಳಾಗಿದ್ದ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಅವರು ಟಿಕೆಟ್ ವಂಚಿತರಾದ ಬಳಿಕ ಪಕ್ಷಕ್ಕೆ ಗುಡ್‌ಬೈ ಹೇಳಿ ಕಾಂಗ್ರೆಸ್ ಸೇರಿದ್ದರು.
ಬಿಜೆಪಿಯಿಂದ 2012 ರಲ್ಲಿ ಸಿಎಂ ಆಗಿದ್ದ ಜಗದೀಶ್ ಶೆಟ್ಟರ್ ಅವರು ಇದುವರೆಗೆ ಯಾವ ಚುನಾವಣೆಯಲ್ಲೂ ಸೋಲದೆ 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 1999 ಹಾಗೂ 2013ರಲ್ಲೂ ಪ್ರತಿಪಕ್ಷ ನಾಯಕರಾಗಿ ಕೆಲಸ ಮಾಡಿದ್ದ ಅನುಭವ ಹೊಂದಿದ್ದಾರೆ. 2008- 13 ರ ಅವಧಿಯಲ್ಲಿ ಸ್ಪೀಕರ್ ಆಗಿ, ಬಳಿಕ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಕೆಲಸ ಮಾಡಿದ್ದರು. ನಂತರ ಸದಾನಂದಗೌಡರ ರಾಜೀನಾಮೆಯಿಂದ ರಾಜ್ಯದ ಸಿಎಂ ಆಗಿ ಕೆಲಸ ಮಾಡಿದ್ದರು. 2013 ರಲ್ಲಿ ಇವರ ನೇತೃತ್ವದಲ್ಲೇ ಬಿಜೆಪಿ ಸರ್ಕಾರ ಚುನಾವಣೆ ಎದುರಿಸಿ ಕೇವಲ 40 ಸ್ಥಾನಗಳಿಗೆ ಕುಸಿತ ಕಂಡಿತ್ತು.