ಬೆಂಗಳೂರು:ಸಾರಿಗೆ ನೌಕರರಿಗೆ ನೀಡಿದ್ದ ಲಿಖಿತ ಭರವಸೆಯನ್ನು ಪ್ರಸ್ತುತ ಬಜೆಟ್ ಅಧಿವೇಶನದಲ್ಲಿ ಈಡೇರಿಸಿದೇ ಭಾರಿ ನಿರಾಸೆ ಉಂಟು ಮಾಡಿದ್ದಾರೆ ಎಂದು ಸಾರಿಗೆ ನೌಕರರು ಮತ್ತು ಕುಟುಂಬಸ್ಥರು ಮಾರ್ಚ್ 1ರಿಂದ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ರಾಜ್ಯ ಘಟಕದ ಅಧ್ಯಕ್ಷ ಆರ್.ಚಂದ್ರಶೇಖರ್ ತಿಳಿಸಿದರು.
ಸೋಮವಾರ ಪ್ರೆಸ್ ಕ್ಲಬ್ನಲ್ಲಿ ನೆಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಲಕ್ಷ್ಮಣ್ ಸವದಿ ಸಾರಿಗೆ ಸಚಿವ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೃಹಮಂತ್ರಿಯಾಗಿದ್ದ ಸಂದರ್ಭದಲ್ಲಿ ನಡೆದ ಸಂಧಾನ ಸಭೆಯಲ್ಲಿ ಸರ್ಕಾರಿ ಸಾರಿಗೆ ನೌಕರರಿಗೂ 6ನೇ ವೇತನ ಆಯೋಗ ಮಾದರಿಯಲ್ಲಿ ವೇತನ ನೀಡುವುದಾಗಿ ಲಿಖಿತ ರೂಪದಲ್ಲಿ ಭರವಸೆ ನೀಡಿದ್ದರು. ಜೊತೆಗೆ ಮೂರು ತಿಂಗಳೊಳಗೆ ಈಡೇರಿಸುವುದಾಗಿಯೂ ತಿಳಿಸಿದ್ದರು ಎಂದರು.
ಕೆಲವು ತಿಂಗಳ ಹಿಂದೆ ಪ್ರಸ್ತುತ ಸಾರಿಗೆ ಸಚಿವ ಶ್ರೀರಾಮುಲು ಕೂಡಾ ಬಹಿರಂಗ ಸಭೆಯಲ್ಲಿ ಸಾರಿಗೆ ನೌಕರರನ್ನು 7ನೇ ವೇತನ ಆಯೋಗದಲ್ಲಿ ಸೇರ್ಪಡೆ ಮಾಡುವುದು ನನ್ನ ಜವಾಬ್ದಾರಿ ಎಂದು ತಿಳಿಸಿದ್ದರು. ಆದರೂ, ಸರ್ಕಾರದ ಕೊನೆಯ ಬಜೆಟ್‌ನಲ್ಲಿಯೂ ಬೇಡಿಕೆಯನ್ನು ಈಡೇರಿಸದೇ ಸಾರಿಗೆ ಸಂಸ್ಥೆಯ 1.07 ಲಕ್ಷ ಸಾರಿಗೆ ನೌಕರರಿಗೆ ನಿರಾಸೆ ಉಂಟುಮಾಡಿದೆ ಎಂದು ಹೇಳಿದರು.