ಬೆಂಗಳೂರು: ಶಾಲೆಯಲ್ಲಿ ಮಕ್ಕಳ ಕಲಿಕಾ ವಾತಾವರಣವನ್ನು ಸ್ನೇಹಿಯನ್ನಾಗಿಸೋದು ಮತ್ತು ಪಠ್ಯೇತರ ಚಟುವಟಿಕೆ ಮುಖಾಂತರ ಒಂದಷ್ಟು ಮೌಲ್ಯಯುತ ಶಿಕ್ಷಣ ನೀಡುವ ದೃಷ್ಟಿಯಿಂದ ಶಿಕ್ಷಣ ಇಲಾಖೆ ತಿಂಗಳ ಒಂದು ಶನಿವಾರದಂದು ಬ್ಯಾಗ್ ಲೆಸ್ ಡೇ ಆಚರಿಸಲು ಮುಂದಾಗಿದೆ.
ಪ್ರಾಯೋಗಿಕವಾಗಿ ಇನ್ಮುಂದೆ ಶಾಲೆಗಳಲ್ಲಿ ಶನಿವಾರ ಬ್ಯಾಗ್ ಲೆಸ್ ಡೇ... ಈ ಸಂಬಂಧ ಅಗತ್ಯ ರೂಪುರೇಷೆ ಬಗ್ಗೆ ಚರ್ಚಿಸಲು ಕೆಲವು ಸ್ವಯಂ ಸೇವಾಸಂಸ್ಥೆಗಳು ಮುಂದೆ ಬಂದಿದ್ದು, 2019 ನವೆಂಬರ್ 2 ರಂದು ಪ್ರಾತ್ಯಕ್ಷಿತೆಯನ್ನು ಪರಾಮರ್ಶಿಸಿ ಪೈಲಟ್ ಯೋಜನೆಯನ್ನು ಆರಂಭಿಸಲು ಕ್ರಮ ವಹಿಸಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.
ರಾಜ್ಯದಲ್ಲಿ ಬ್ಯಾಗ್ ಲೆಸ್ ಡೇಗೆ ಒಳ್ಳೆಯ ಸ್ಪಂದನೆ ಸಿಕ್ಕಿದೆ. ಆದರೆ ಕೆಲವರು 4 ಶನಿವಾರವೂ ಬ್ಯಾಗ್ ಲೆಸ್ ಡೇ ಬೇಡ, ಬದಲಾಗಿ 2 ಶನಿವಾರ ಮಾಡಿ ಎಂದು ಮನವಿ ಮಾಡಿದ್ದಾರೆ. ಇದರಿಂದ ಪಾಠಗಳು ಬಾಕಿ ಉಳಿಯಲಿರುವ ಆತಂಕ ವ್ಯಕ್ತಪಡಿಸಿರುವುದಾಗಿ ಅವರು ಹೇಳಿದ್ರು.
ಶಾಲಾ ಸುರಕ್ಷತೆ ಕುರಿತಂತೆ ಈ ಹಿಂದೆ ಸೆಪ್ಟೆಂಬರ್ 9 ರಂದು ಪೊಲೀಸ್ ಅಧಿಕಾರಿಗಳು ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿತ್ತು. ಶಿಕ್ಷಣ ಇಲಾಖೆ ಮತ್ತು ಪೊಲೀಸ್ ಇಲಾಖೆಗಳು ಸಮನ್ವಯದಿಂದ ಪ್ರತಿಕ್ರಿಯೆ ನೀಡುವಂತೆ ಎಲ್ಲ ಆದೇಶಗಳನ್ನು ಕೂಡಲೇ ಜಾರಿಮಾಡಿ ವರದಿ ನೀಡಲು ಇಲಾಖಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.