ಬೆಂಗಳೂರು:ಸಚಿವ ಸಂಪುಟ ವಿಸ್ತರಣೆಗೆ ದೆಹಲಿಯಲ್ಲಿ ಸಿಎಂ ಹಾಗೂ ಡಿಸಿಎಂ ನಡೆಸಿದ ಕಸರತ್ತು ಫಲಪ್ರದವಾಗಿದ್ದು ಶನಿವಾರ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿದೆ. ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ರಾಜಕೀಯ ಚಟುವಟಿಕೆ ಗರಿ ಗೆದರಿದ್ದು, ನೂತನ ಸಚಿವರ ಪಟ್ಟಿ ಫೈನಲ್ ಆಗಿದೆ ಎಂಬ ಮಾಹಿತಿ ಇದೆ.
ಎರಡು ದಿನಗಳ ಪ್ರವಾಸ ಪ್ರಯುಕ್ತ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಿನ್ನೆ ಡೆಲ್ಲಿಗೆ ತೆರಳಿದ್ದು ರಾಷ್ಟ್ರೀಯ ನಾಯಕರ ಜೊತೆ ಸುದೀರ್ಘ ಸಮಾಲೋಚನೆ ನಡೆಸಿ ಸಚಿವ ಸಂಪುಟ ವಿಸ್ತರಣೆಗೆ ಪಟ್ಟಿ ಅಂತಿಮಗೊಳಿಸಿದ್ದಾರೆ ಎಂಬ ಮಾಹಿತಿ ಇದೆ. ದಿನವಿಡೀ ವಿವಿಧ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿ ಚರ್ಚಿಸಿರುವ ಸಿಎಂ ಹಾಗೂ ಡಿಸಿಎಂ ಪಟ್ಟಿಯನ್ನು ಅಂತಿಮಗೊಳಿಸಿಕೊಂಡಿದ್ದು, ಗುರುವಾರ ರಾತ್ರಿ ಇಲ್ಲವೇ ಶುಕ್ರವಾರ ಬೆಳಗ್ಗೆ ಅಧಿಕೃತ ಬಿಡುಗಡೆ ಆಗುವ ಸಾಧ್ಯತೆ ಇದೆ.
ಈಗಾಗಲೇ ಸರ್ಕಾರದಿಂದ ಸಚಿವ ಸಂಪುಟ ವಿಸ್ತರಣೆ ಸಂಬಂಧ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ರಿಗೆ ಮಾಹಿತಿ ರವಾನೆ ಆಗಿದ್ದು, ಮೇ 27 ಅಂದರೆ ಶನಿವಾರ ಬೆಳಗ್ಗೆ 11:45ಕ್ಕೆ ನೂತನ ಸಚಿವರ ಪದಗ್ರಹಣ ಸಮಾರಂಭ ರಾಜಭವನದ ಒಳಗೆ ನಡೆಯಲಿದೆ. ಒಟ್ಟು 34 ಸ್ಥಾನಗಳ ಪೈಕಿ ಈಗಾಗಲೇ ಸಿಎಂ ಡಿಸಿಎಂ ಹಾಗೂ 8 ಸಚಿವರು ಸೇರಿದಂತೆ ಒಟ್ಟು 10 ಸ್ಥಾನಗಳು ಭರ್ತಿ ಆಗಿವೆ. ಉಳಿದಿರುವ 24 ಸ್ಥಾನಗಳ ಪೈಕಿ 20 ಸ್ಥಾನಗಳನ್ನ ಭರ್ತಿ ಮಾಡಿಕೊಂಡು ಉಳಿದ ನಾಲ್ಕು ಸ್ಥಾನವನ್ನು ಕಾಯ್ದಿರಿಸಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ.
ಒಟ್ಟು 24 ಸ್ಥಾನಗಳಿಗೆ 80ಕ್ಕೂ ಹೆಚ್ಚು ಶಾಸಕರು ಆಕಾಂಕ್ಷಿಗಳಾಗಿದ್ದು, ಪಕ್ಷದ ನಾಯಕರ ಮೇಲೆ ತೀವ್ರವಾದ ಒತ್ತಡ ಹಾಕುತ್ತಿದ್ದಾರೆ. ಈ ಹಿನ್ನೆಲೆ ಅಳೆದು ತೂಗಿ ಸಚಿವ ಸಂಪುಟ ವಿಸ್ತರಣೆಗೆ ಪಟ್ಟಿ ಸಿದ್ಧಪಡಿಸಿರುವ ನಾಯಕರು ಇದಾದ ಬಳಿಕ ಉಂಟಾಗುವ ಅಸಮಾಧಾನ ಶಮನಕ್ಕೆ ನಾಲ್ಕು ಸ್ಥಾನವನ್ನು ಖಾಲಿ ಇರಿಸಿಕೊಳ್ಳಲು ತೀರ್ಮಾನಿಸಿದ್ದಾರೆ. ಶಾಸಕರ ಅಸಮಾಧಾನದ ಬಿಸಿ ಆಧರಿಸಿ ಆ ನಾಲ್ಕು ಸ್ಥಾನಗಳಿಗೆ ಸೂಕ್ತ ವ್ಯಕ್ತಿಗಳನ್ನ ಸೇರಿಸಿಕೊಳ್ಳುವ ಚಿಂತನೆ ಕಾಂಗ್ರೆಸ್ ನಡೆಸಿದೆ.
ಸಿಎಂ ಹಾಗೂ ಡಿಸಿಎಂ ರಾಷ್ಟ್ರೀಯ ನಾಯಕರ ಜೊತೆ ನಡೆಸಿದ ಸಭೆಯಲ್ಲಿ ಈ ಮಾಹಿತಿಯನ್ನು ವಿವರಿಸಿದ್ದು, ಇವರ ಮಾತಿಗೆ ಹೈಕಮಾಂಡ್ ನಾಯಕರು ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ. ಸದ್ಯ ರಾಜ್ಯಪಾಲರು ಪ್ರವಾಸದಲ್ಲಿದ್ದು ಶನಿವಾರ ಬೆಳಗ್ಗೆ 11:45ರ ಒಳಗೆ ಬೆಂಗಳೂರಿಗೆ ತಲುಪುವಂತೆ ಸರ್ಕಾರದ ಪರವಾಗಿ ಮನವಿ ಸಲ್ಲಿಸಲಾಗಿದೆ. ರಾಜ್ಯಪಾಲರು ಸಹ ಒಪ್ಪಿದ್ದು 20 ಸಚಿವರಿಗೆ ಅಂದು ಪ್ರಮಾಣವಚನ ಬೋಧಿಸಲಿದ್ದಾರೆ.