ಬೆಂಗಳೂರು: ಬಿಡುಗಡೆ ವಿಚಾರದಲ್ಲಿ ನನ್ನ ಅನುಮತಿ ಇಲ್ಲದೆ ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ) ಅಡಿ ಯಾರಿಗೂ ಮಾಹಿತಿ ನೀಡಬೇಡಿ ಎಂದು ಜೈಲಾಧಿಕಾರಿಗಳಿಗೆ ಶಶಿಕಲಾ ನಟರಾಜನ್ ಪತ್ರ ಬರೆದಿದ್ದಾರೆ.
ಇತ್ತೀಚೆಗೆ ಆರ್ಟಿಐ ಕಾರ್ಯಕರ್ತ ನರಸಿಂಹಮೂರ್ತಿ ಎಂಬವರು, ಶಶಿಕಲಾ ಜೈಲಿನಿಂದ ಯಾವಾಗ ಬಿಡುಗಡೆ ಆಗಲಿದ್ದಾರೆ ಎಂದು ಆರ್ಟಿಐ ಅಡಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಉತ್ತರ ನೀಡಿದ ಕಾರಾಗೃಹ ಇಲಾಖೆ, 2021 ಜನವರಿ 27 ರಂದು ಬಿಡುಗಡೆಯಾಗಲಿದ್ದಾರೆ. ಒಂದು ವೇಳೆ ನ್ಯಾಯಾಲಯ ವಿಧಿಸಿದ 10 ಕೋಟಿ ರೂ. ದಂಡ ಪಾವತಿಸದಿದ್ದರೆ, 2022 ರ ಜನವರಿಯಲ್ಲಿ ಬಿಡುಗಡೆಯಾಗಲಿದ್ದಾರೆ ಎಂದು ತಿಳಿಸಿತ್ತು. ಈ ಸಂಬಂಧ ಸೆ.16 ರಂದು ಜೈಲಿನಲ್ಲೇ ಪತ್ರ ಬರೆದಿರುವ ಶಶಿಕಲಾ, ನನ್ನ ಬಿಡುಗಡೆ ಮಾಡುವ ವಿಚಾರದಲ್ಲಿ ಹಾಗೂ ನನಗೆ ಸಂಬಂಧಿಸಿದ ವಿಷಯಗಳಿಗೆ ಯಾವುದೇ ರೀತಿಯಿಂದಲೂ ಮಾಹಿತಿ ನೀಡಬೇಡಿ ಎಂದು ಜೈಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ.