ಬೆಂಗಳೂರು:ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸುತ್ತಿರುವ ಮಲ್ಲಿಕಾರ್ಜುನ ಖರ್ಗೆ ಅವರ ಸ್ವಾಗತಕ್ಕೆ ಸರ್ವೋದಯ ಸಮಾವೇಶ ಹಮ್ಮಿಕೊಂಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಭಾನುವಾರ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನದ ನಂತರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ರಾಜ್ಯದ ವಿವಿಧ ಭಾಗಗಳಿಂದ ಭಾರಿ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಬೇಕಾಗಿರುವ ಹಿನ್ನೆಲೆ ಮಧ್ಯಾಹ್ನದ ನಂತರ ಕಾರ್ಯಕ್ರಮ ರೂಪಿಸಲಾಗಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಹಲವು ರಾಷ್ಟ್ರೀಯ ನಾಯಕರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ ಸಿಂಗ್ ಸುರ್ಜೆವಾಲಾ ಎರಡು ದಿನ ಮುಂಚಿತವಾಗಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ನ ಎಲ್ಲಾ ನಾಯಕರು ಈ ವೇದಿಕೆಯ ಮೇಲೆ ಉಪಸ್ಥಿತರಿದ್ದು, ಒಗ್ಗಟ್ಟು ಪ್ರದರ್ಶಿಸಲಿದ್ದೇವೆ ಎಂದರು.
ಅರ್ಜಿ ಸ್ವೀಕಾರ:ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷಿಗಳಿಂದ ಅರ್ಜಿ ಸ್ವೀಕರಿಸುತ್ತೇವೆ. ಇದೇ ತಿಂಗಳ ಐದರಿಂದ 15ನೇ ತಾರೀಖಿನವರೆಗೆ ಅರ್ಜಿಗಳನ್ನ ಸ್ವೀಕರಿಸುತ್ತೇವೆ. ಅರ್ಜಿ ಕಾಂಗ್ರೆಸ್ ಕಚೇರಿಯಲ್ಲಿ ಲಭಿಸಲಿದೆ. ಅರ್ಜಿ ನಮೂನೆಯನ್ನು 5,000 ಪಾವತಿಸಿ ಭರ್ತಿ ಮಾಡಿ ಕೊಡಬೇಕು. ಅರ್ಜಿ ಸಲ್ಲಿಸುವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಒಂದು ಲಕ್ಷ ರೂಪಾಯಿ ಹಾಗೂ ಸಾಮಾನ್ಯ ವರ್ಗದವರಿಗೆ ಎರಡು ಲಕ್ಷ ರೂಪಾಯಿ ಡಿಡಿ ತೆಗೆದು ಅರ್ಜಿ ಸಲ್ಲಿಸುವಂತೆ ಸೂಚಿಸಿದ್ದೇವೆ. ಹಾಲಿ ಶಾಸಕರು ಸೇರಿದಂತೆ ಯಾರ್ಯಾರು ಶಾಸಕ ಸ್ಥಾನಕ್ಕೆ ಸ್ಪರ್ಧಿಸಲು ಬಯಸಿದರೆ ಅರ್ಜಿ ಸಲ್ಲಿಸಬೇಕಾದ್ದು ಕಡ್ಡಾಯ. ನನ್ನನ್ನು ಸೇರಿದಂತೆ ಈ ನಿಯಮ ಅನ್ವಯ ಆಗಲಿದೆ ಎಂದು ಹೇಳಿದರು.
ಸದಸ್ಯತ್ವ ನೋಂದಣಿ ಅಭಿಯಾನ: ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ಸಾಕಷ್ಟು ಜನ ಆಸಕ್ತಿ ತೋರುತ್ತಿದ್ದಾರೆ. ಇದರಿಂದ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನ ಆನ್ಲೈನ್ ಮೂಲಕ ಮತ್ತೊಮ್ಮೆ ಆರಂಭಿಸಿದ್ದೇವೆ. ಚುನಾವಣೆಗೂ ಮುನ್ನ ವಿವಿಧ ಪಕ್ಷಗಳಿಂದ ನಮ್ಮ ಪಕ್ಷಕ್ಕೆ ಸೇರಲು ಕೆಲವರು ಆಸಕ್ತಿ ತೋರುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿ ನಮ್ಮ ರಾಷ್ಟ್ರೀಯ ನಾಯಕರ ನಾಯಕತ್ವವನ್ನು ಒಪ್ಪಿ ಬರುವವರಿಗೆ ನಾವು ಮುಕ್ತ ಆಹ್ವಾನ ನೀಡುತ್ತಿದ್ದೇವೆ.
ಸಮಿತಿ ಮೂಲಕ ಪರಿಶೀಲನೆ: ಅಲ್ಲಮ್ ವೀರಭದ್ರಪ್ಪ ನೇತೃತ್ವದಲ್ಲಿ ಒಂದು ಸಮಿತಿ ಸಹ ಇದ್ದು ಅದರ ಮೂಲಕ ಪರಿಶೀಲನೆ ನಡೆಸಿ ನಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇವೆ. ಯಾವುದೇ ಪಕ್ಷದವರು ಕಾಂಗ್ರೆಸ್ ಪಕ್ಷವನ್ನು ಸೇರುವುದಾದರೂ ಅವರಿಗೆ ಉತ್ತಮವಾದ ಅವಕಾಶವಿದ್ದು, ಕಾಂಗ್ರೆಸ್ಗೆ ಬರುವಂತೆ ಆಹ್ವಾನ ನೀಡುತ್ತಿದ್ದೇನೆ. ಪಕ್ಷ ಸೇರಬಯಸುವ ಯಾವುದೇ ವ್ಯಕ್ತಿ ಬೇಕಾದರೂ ಅರ್ಜಿ ಸಲ್ಲಿಸಬಹುದು. ಸೇರ್ಪಡೆಯಾಗುವ ಮುಖಂಡರ ಮಾಹಿತಿಯನ್ನು ನಮ್ಮ ಸಮಿತಿ ಪರಿಶೀಲಿಸಿ ಮುಂದಿನ ತೀರ್ಮಾನ ಕೈಗೊಳ್ಳಲಿದೆ.
ಮಲ್ಲಿಕಾರ್ಜುನ ಖರ್ಗೆ 50 ವರ್ಷಗಳ ಸುದೀರ್ಘ ರಾಜಕೀಯ ಅನುಭವ ಹೊಂದಿದ್ದಾರೆ. ರಾಷ್ಟ್ರದಲ್ಲೆ ಇಂತಹ ಒಬ್ಬ ಹಿರಿಯ ನಾಯಕರು ಪಕ್ಷದ ಅತ್ಯುನ್ನತ ಸ್ಥಾನ ಅಲಂಕರಿಸಿದ್ದು, ಕರ್ನಾಟಕದ ಕೀರ್ತಿ ಹೆಚ್ಚಿಸಿದ್ದಾರೆ. ಐವತ್ತು ವರ್ಷಗಳ ಬಳಿಕ ಇಂಥದ್ದೊಂದು ಅವಕಾಶ ಕರ್ನಾಟಕಕ್ಕೆ ಲಭಿಸಿದೆ. ಮಲ್ಲಿಕಾರ್ಜುನ್ ಖರ್ಗೆ ಅವರಂತ ಅನುಭವಿ ವ್ಯಕ್ತಿಯ ಮಾರ್ಗದರ್ಶನ ನಮಗೆ ಬೇಕಿತ್ತು. ಇದೀಗ ಆಶಯ ಈಡೇರಿದ್ದು ಈ ಸಂದರ್ಭದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗುವವರಿಗೆ ಆಹ್ವಾನ ನೀಡುತ್ತಿದ್ದೇನೆ.
ಮಲ್ಲಿಕಾರ್ಜುನ ಖರ್ಗೆ ಸ್ವಾಗತ ಸಮಾರಂಭ:ಸೋನಿಯಾ ಗಾಂಧಿ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ನಾಯಕತ್ವವನ್ನು ಮೆಚ್ಚಿ ಬರುವವರಿಗೆ ಮುಕ್ತ ಅವಕಾಶ ಇದೆ. 224 ಕ್ಷೇತ್ರಗಳ ವಾರ್ಡ್ ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಮಟ್ಟದಲ್ಲಿ ನಾಯಕರು ಕಾಂಗ್ರೆಸ್ ನತ್ತ ಬರಬೇಕು ಎಂದು ಬಯಸುತ್ತಿದ್ದೇವೆ. ಪಕ್ಷದಲ್ಲಿ ವಿವಿಧ ಘಟಕಗಳು ಇದ್ದು, ಆ ಘಟಕದ ಮುಖ್ಯಸ್ಥರು ತಾಲೂಕು ಮತ್ತು ವಾರ್ಡ್ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನರನ್ನ ಭೇಟಿ ಮಾಡಿ ಕಾರ್ಯಕರ್ತರನ್ನ ಒಗ್ಗೂಡಿಸಿ ಬೆಂಗಳೂರಿಗೆ ಕರೆತಂದು ಮಲ್ಲಿಕಾರ್ಜುನ ಖರ್ಗೆ ಸ್ವಾಗತ ಸಮಾರಂಭವನ್ನು ಯಶಸ್ವಿಗೊಳಿಸಬೇಕು ಎಂದು ಕೋರುತ್ತೇನೆ ಎಂದು ಹೇಳಿದರು.
ಪಕ್ಷ ಹಾಗೂ ಪಕ್ಷದ ನಾಯಕರನ್ನು ಈ ಸಂದರ್ಭದಲ್ಲಿ ಸ್ಮರಿಸುವ ಕಾರ್ಯವನ್ನು ಪಕ್ಷದ ಕಾರ್ಯಕರ್ತರು ಹಾಗೂ ನಾಯಕರು ಜಾಹೀರಾತು ಮೂಲಕ ಮಾಧ್ಯಮಗಳಲ್ಲಿ ಪ್ರಚಾರ ನೀಡಲು ಬಯಸಿದರೆ ಅದಕ್ಕೆ ಮುಕ್ತ ಅವಕಾಶ ನೀಡಲಾಗಿದೆ. ಯಾರು ಬೇಕಾದರೂ ಮಲ್ಲಿಕಾರ್ಜುನ ಖರ್ಗೆ ಅವರ ಸ್ವಾಗತಕ್ಕೆ ಹಾಗೂ ಪಕ್ಷದ ಪರವಾಗಿ ಜಾಹೀರಾತು ಇರಬಹುದು ಎಂದು ವಿವರಿಸಿದರು.
ಅರ್ಜಿ ಸಲ್ಲಿಕೆ ಮಾಡಬೇಕು:ನಮ್ಮ ಪಕ್ಷದ ಸಾಮಾನ್ಯ ತತ್ವ ಸಿದ್ಧಾಂತವನ್ನು ಒಪ್ಪಿ ಬರುವವರಿಗೆ ಮುಕ್ತ ಅವಕಾಶ ನೀಡುತ್ತೇವೆ. ಅಲ್ಲ ವೀರಭದ್ರಪ್ಪ ನೇತೃತ್ವದ ಸಮಿತಿಯಲ್ಲಿ ಎಲ್ಲವೂ ತೀರ್ಮಾನ ಆಗಲಿದೆ. ಪಕ್ಷ ಸೇರ್ಪಡೆ ಆಗುವವರು ಅರ್ಜಿ ಸಲ್ಲಿಕೆ ಮಾಡಲೇಬೇಕು. ಯಾರಿಗೂ ನಿಯಮ ಹೊರತುಪಡಿಸಿ ಸೇರ್ಪಡೆ ಮಾಡಿಕೊಳ್ಳುವ ಅವಕಾಶ ಇಲ್ಲ. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಂದ ನಾವು ಹಣ ಸ್ವೀಕರಿಸುವ ಹಿಂದೆ ಪಕ್ಷ ಬೆಳೆಸುವ ಹಾಗೂ ಚುನಾವಣೆ ನಡೆಸುವ ಆಶಯ ಇದೆ.
ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು, ಮಾಧ್ಯಮಗಳ ಮೂಲಕ ಜಾಹೀರಾತು ನೀಡುವುದು ಸೇರಿದಂತೆ ವಿವಿಧ ಕಾರ್ಯಗಳಿಗೆ ಚುನಾವಣೆ ಸಂದರ್ಭದಲ್ಲಿ ಪಕ್ಷಕ್ಕೆ ಹಣದ ಅಗತ್ಯ ಬೀಳಲಿದೆ. ಈ ಹಿನ್ನೆಲೆೆ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಬಯಸುವವರಿಂದ ನಾವು ಡಿಡಿ ಸ್ವೀಕರಿಸುತ್ತೇವೆ. ಪಕ್ಷದ ಎಲ್ಲಾ ನಾಯಕರು ಸೇರಿ ಚರ್ಚಿಸಿಯೇ, ಈ ತೀರ್ಮಾನ ಕೈಗೊಂಡಿದ್ದೇವೆ. ಎಐಸಿಸಿ ನಾಯಕರು ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಒಪ್ಪಿ ಪಕ್ಷದ ತೀರ್ಮಾನವಾಗಿ ವಿವರ ನೀಡುತ್ತಿದ್ದೇನೆ.
ಇದನ್ನೂ ಓದಿ:ಅಸೂಯೆಗೆ ಮದ್ದಿಲ್ಲ, ಬಿಜೆಪಿಯವರು ಮಾತ್ನಾಡಿಕೊಂಡಿರ್ಲಿ: ಡಿಕೆಶಿ
ನನ್ನ ಅಭಿಪ್ರಾಯ ಬೇರೆ ಸಿದ್ದರಾಮಯ್ಯನವರ ಅಭಿಪ್ರಾಯ ಬೇರೆ ಎಂಬ ವಿಷಯ ಇಲ್ಲ. ನಮ್ಮ ಪಕ್ಷಕ್ಕೆ ಯಾರ ಮಾರ್ಗದರ್ಶನವೂ ಇಲ್ಲ ಹಾಗೂ ಯಾವುದೇ ಗಡಿಯನ್ನು ನಾವು ಹಾಕಿಕೊಂಡಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸುವ ಅವರಿಗೆ ಯಾವುದೇ ವಯಸ್ಸಿನ ಮಿತಿ ಹೇರಿಲ್ಲ. ಹಿರಿಯರಿಗೆ ಪಕ್ಷದಲ್ಲಿ ಗೌರವ ಇದ್ದೇ ಇರಲಿದೆ. ಶ್ರೀರಾಮುಲು ಮಲಗಿದ್ದಾರೆ ಎಂದರೆ ರಾಮರಾಜ್ಯದ ಪರಿಸ್ಥಿತಿ ಏನಾಗಿದೆ ಎಂಬ ಅರಿವು ಮೂಡುತ್ತದೆ ಎಂದು ನಗುತ್ತಾ ಹೇಳಿದ ಡಿಕೆಶಿ, ಮಾಜಿ ಸಚಿವ ಜನಾರ್ದನ್ ರೆಡ್ಡಿ ಆಕ್ರೋಶಕ್ಕೆ ಮಾರ್ಮಿಕವಾಗಿ ಉತ್ತರ ನೀಡಿದರು.