ಬೆಂಗಳೂರು/ಮೈಸೂರು:ಗುಜರಾತಿನಲ್ಲಿ ಬಂಧಿತನಾಗಿದ್ದ ಸ್ಯಾಂಟ್ರೋ ರವಿಯನ್ನ ತಡರಾತ್ರಿ 11.30ಕ್ಕೆ ವಿಮಾನದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತರಲಾಯಿತು. ಬಳಿಕ ರಸ್ತೆ ಮಾರ್ಗದಲ್ಲಿ ಬಿಗಿ ಭದ್ರತೆಯೊಂದಿಗೆ ಮೈಸೂರಿಗೆ ಕರೆದೊಯ್ದು ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೊಳಪಡಿಸಲಾಗಿದೆ.
ಸ್ಯಾಂಟ್ರೋ ರವಿ ವಿರುದ್ಧ ಲೈಗಿಂಕ ದೌರ್ಜನ್ಯ, ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಪ್ರಾಥಮಿಕ ವಿಚಾರಣೆ ನಡೆಯುತ್ತಿದೆ. ಪ್ರಕರಣಗಳ ಸಂಬಂಧ ಪ್ರಾಥಮಿಕ ಪ್ರಶ್ನೆಗಳಿಗೆ ಉತ್ತರ ಪಡೆಯುತ್ತಿದ್ದೇವೆ. ಆರೋಪಿಯ ಬಂಧನವಾದ ನಂತರ ಪ್ರಯಾಣದ ಅವಧಿ ಬಿಟ್ಟು 24 ಗಂಟೆಯೊಳಗೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸಬೇಕು. ಇಂದು ಬೆಳಗ್ಗೆಯಿಂದ 24 ಗಂಟೆಯೊಳಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸುತ್ತೇವೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಪ್ರಾಥಮಿಕ ವಿಚಾರಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎಡಿಜಿಪಿ ಅಲೋಕ್ ಕುಮಾರ್, ಎಲ್ಲಾ ಲಿಖಿತಗವಾಗಿ ದಾಖಲೆ ಆಗುತ್ತಿದೆ. ಎಲ್ಲದಕ್ಕೂ ಸ್ಯಾಂಟ್ರೋ ರವಿ ಸಹಕರಿಸುತ್ತಿದ್ದಾನೆ. ಪ್ರತಿ ಗಂಟೆಗೂ ಆತ ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದಾನೆ. ಹೀಗಾಗಿ ಅಗತ್ಯವಿರುವ ಔಷಧ ಕೊಡಿಸಿ ಎಂದು ಐಓಗೆ ಹೇಳಿದ್ದೇವೆ. ಲಿಖಿತ ಹೇಳಿಕೆ ಮುಗಿಸಿದ ಬಳಿಕ ಮೆಡಿಕಲ್ ಚೆಕ್ ಆಪ್ ಮಾಡಲಾಗುವುದು. ನಂತರ ನ್ಯಾಯಧೀಶರ ಮುಂದೆ ಕರೆತರಲಾಗುವುದು. ನ್ಯಾಯಾಧೀಶರ ಬಳಿ ಎರಡು ವಾರ ಕಸ್ಟಡಿಗೆ ಕೊಡುವಂತೆ ಮನವಿ ಮಾಡ್ತೇವೆ. ಮೊದಲು ವಿಜಯ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಮಾತ್ರ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದರು. ಸ್ಯಾಂಟ್ರೋ ರವಿ ವಿಚಾರಣೆ ಹಿನ್ನೆಲೆ ವಿಜಯನಗರ ಪೊಲೀಸ್ ಠಾಣೆಯ ಸುತ್ತಮುತ್ತ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ಸಿಸಿಬಿ ಪೊಲೀಸರಿಂದ ವಿಚಾರಣೆ ಸಾಧ್ಯತೆ:ಗುಜರಾತ್ ರಾಜ್ಯದಲ್ಲಿ ಬಂಧನವಾಗಿರುವ ಸ್ಯಾಂಟ್ರೋ ರವಿಯನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ವಿಚಾರಣೆ ನಡೆಸುವ ಸಾಧ್ಯತೆಯಿದೆ. ಪತ್ನಿ ವಿರುದ್ಧ ಷಡ್ಯಂತ್ರ ಮಾಡಿ ಕಾಟನ್ ಪೇಟೆ ಠಾಣೆಯಲ್ಲಿ ದೂರು ದಾಖಲಾಗುವಂತೆ ಮಾಡಿರುವ ಆರೋಪ ಸಹ ಸ್ಯಾಂಟ್ರೋ ರವಿ ವಿರುದ್ಧ ಇದೆ. ಪ್ರಕರಣ ಸಂಬಂಧ ಈಗಾಗಲೇ ಕಾಟನ್ ಪೇಟೆ ಠಾಣೆಯ ಅಂದಿನ ಇನ್ಸ್ಪೆಕ್ಟರ್ ಪ್ರವೀಣ್ ಅಮಾನತ್ತಾಗಿದ್ದು, ಸದ್ಯ ಈ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿದೆ. ಆದ್ದರಿಂದ ಮೈಸೂರು ಪೊಲೀಸರ ವಶದಲ್ಲಿರುವ ರವಿಯನ್ನು ಸಿಸಿಬಿ ಪೊಲೀಸರು ಕಸ್ಟಡಿಗೆ ಕೇಳುವ ಸಾಧ್ಯತೆಯಿದೆ.