ಕರ್ನಾಟಕ

karnataka

ETV Bharat / state

ಹುಟ್ಟುವಾಗ ಅಷ್ಟೇ ಅಲ್ಲ, ಸಾಯುವಾಗಲೂ ಅಪ್ಪಟ ಕನ್ನಡಿಗರಾಗಿರಬೇಕು: ಸಂತೋಷ್ ಹೆಗ್ಡೆ

ಕನ್ನಡ ಶ್ರೀಮಂತ ಭಾಷೆ. ಭಾಷೆಯ ಹಿರಿಮೆ, ಗರಿಮೆಯನ್ನು ಪ್ರತಿಯೊಬ್ಬರೂ ಎತ್ತಿ ಹಿಡಿಯಬೇಕು ಎಂದು ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಸಲಹೆ ನೀಡಿದರು.

program was held.
ಕುವೆಂಪು ಜನ್ಮ ದಿನದ ಪ್ರಯುಕ್ತ ಕರ್ನಾಟಕ ಸುವರ್ಣ ಮಹೋತ್ಸವ ಕಾರ್ಯಕ್ರಮ ನಡೆಯಿತು.

By ETV Bharat Karnataka Team

Published : Dec 29, 2023, 10:42 PM IST

ಬೆಂಗಳೂರು: ಬಹುಭಾಷಿಕ ವಾತಾವರಣದಲ್ಲಿ ಎಂದೆಂದಿಗೂ ಕನ್ನಡವನ್ನು ಮರೆಯಬಾರದು. ಕನ್ನಡವೇ ನಮ್ಮ ಸಾರ್ವಭೌಮ ಭಾಷೆಯಾಗಿರಬೇಕು. ಕನ್ನಡಿಗರು ಇತರರನ್ನು ಗೌರವಿಸಬೇಕು ಎಂದು ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಹೇಳಿದ್ದಾರೆ. ನಗರದ ಟೌನ್ ಹಾಲ್‌ನಲ್ಲಿ ಇಂದು ಜಯಕರ್ನಾಟಕ ಸಂಘಟನೆಯಿಂದ ಕುವೆಂಪು ಜನ್ಮದಿನದ ಪ್ರಯುಕ್ತ ಆಯೋಜಿಸಿದ್ದ ಕರ್ನಾಟಕ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಏನಾದರೂ ಆಗು ಮೊದಲು ಮಾನವನಾಗು ಎಂಬ ಕವಿವಾಣಿ ನಮ್ಮ ನಾಣ್ಣುಡಿಯಾಗಬೇಕು. ಹುಟ್ಟುವಾಗ ಅಷ್ಟೇ ಅಲ್ಲದೇ ಸಾಯುವಾಗಲೂ ಅಪ್ಪಟ ಕನ್ನಡಿಗರಾಗಿರಬೇಕು. ಕನ್ನಡ ಅತ್ಯಂತ ಶ್ರೀಮಂತ ಭಾಷೆ. ಭಾಷೆಯ ಹಿರಿಮೆ, ಗರಿಮೆಯನ್ನು ಪ್ರತಿಯೊಬ್ಬರೂ ಎತ್ತಿ ಹಿಡಿಯಬೇಕು ಎಂದರು.

ಭ್ರಷ್ಟರನ್ನು ವೈಭವೀಕರಿಸುವ ಪರಿಸ್ಥಿತಿ ನಿರ್ಮಾಣ: ಭ್ರಷ್ಟಾಚಾರದ ವಿರುದ್ಧ ಜನಸಾಮಾನ್ಯರಲ್ಲಿ ಅರಿವು ಮೂಡಿಸಬೇಕು. ಸಮಾಜದಲ್ಲಿ ಅನ್ಯಾಯದ ವಿರುದ್ಧ ಹೋರಾಟ ಮಾಡುವ ಮನೋಭಾವನೆಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಈ ಹಿಂದೆ ಭ್ರಷ್ಟಾಚಾರ ಸಮಾಜಕ್ಕೆ ಅಂಟಿದ ಶಾಪವಾಗಿತ್ತು. ಇದೀಗ ಭ್ರಷ್ಟರನ್ನು ವೈಭವೀಕರಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಸಂತೋಷ್ ಹೆಗ್ಡೆ ವಿಷಾದ ವ್ಯಕ್ತಪಡಿಸಿದರು.

ವಿಧಾನಪರಿಷತ್ ಸದಸ್ಯ ಡಾ.ಟಿ.ಎ.ಶರವಣ ಮಾತನಾಡಿ, ಕನ್ನಡದ ನೆಲ, ಜಲ, ಭಾಷೆಗೆ ಧಕ್ಕೆ ಬಂದಾಗ ನಾವು ಸುಮ್ಮನೆ ಕೂರುವುದಿಲ್ಲ. ಜೆಡಿಎಸ್ ರಾಜ್ಯದ ಅಸ್ಮಿತೆ ಕಾಪಾಡಲು ಸದಾ ಸಿದ್ಧವಾಗಿರುತ್ತದೆ. ಕಳೆದ ಎರಡು ಮೂರು ದಿನಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳು ಖಂಡನೀಯ. ಕನ್ನಡಪರ ಹೋರಾಟಗಾರರಿಗೆ ನ್ಯಾಯ ದೊರಕಿಸಿಕೊಡಲು ಎಲ್ಲರೂ ಮುಂದಾಗಬೇಕು ಎಂದು ಹೇಳಿದರು.

ಹೋರಾಟಗಾರರ ಮೇಲೆ ದ್ವೇಷದ ನಿಲುವು:ಜಯಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಡಾ. ಬಿ.ಎನ್.ಜಗದೀಶ್ ಮಾತನಾಡಿ, ಕನ್ನಡಪರ ಸಂಘಟನೆಗಳು ನಾಡು, ನುಡಿ, ಜಲದ ವಿಚಾರದಲ್ಲಿ ರಾಜಿಯಾಗುವುದಿಲ್ಲ. ಕರವೇ ಅಧ್ಯಕ್ಷ ಟಿ.ಎ.ನಾರಾಯಣ ಗೌಡರ ಬಂಧನ ವಿರೋಧಿಸಿ ನಾವು ಸಂಘಟಿತರಾಗಿ ಹೋರಾಟ ಮಾಡುತ್ತೇವೆ. ಸರ್ಕಾರ ಕನ್ನಡಪರ ಹೋರಾಟಗಾರರ ಮೇಲೆ ದ್ವೇಷದ ನಿಲುವು ತಳೆಯುವುದು ಸರಿಯಲ್ಲ ಎಂದರು.

ಬೆಂಗಳೂರು ನಗರ ಘಟಕದ ಅಧ್ಯಕ್ಷ ಬಿ.ಎನ್.ಯೋಗಾನಂದ್ ಮಾತನಾಡಿ, ಜಯ ಕರ್ನಾಟಕ ಸಂಘಟನೆ ಅಸ್ತಿತ್ವಕ್ಕೆ ಬಂದು 15 ವರ್ಷಗಳು ಕಳೆದಿದ್ದು, ಹಲವು ಹೋರಾಟಗಳಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದೆ. ಸಂಘಟನೆಯ ಆಶೋತ್ತರಗಳನ್ನು ಈಡೇರಿಸಲು ನಾವು ಕಂಕಣಬದ್ಧರಾಗಿರುವುದಾಗಿ ಹೇಳಿದರು.

ಇದನ್ನೂ ಓದಿ:ಕನ್ನಡ ನಾಮಫಲಕ ಕ್ರಾಂತಿ: ಬಾರುಕೋಲು ಹಿಡಿದು ಹುಬ್ಬಳ್ಳಿಯಲ್ಲಿ ‌ಪ್ರತಿಭಟನೆ

ABOUT THE AUTHOR

...view details