ಬೆಂಗಳೂರು:ರಾಜ್ಯದಲ್ಲಿ 100 ಪಡಿತರ ಚೀಟಿ ಹೊಂದಿರುವ ಎಲ್ಲಾ ತಾಂಡಗಳಲ್ಲಿ ನ್ಯಾಯಬೆಲೆ ಅಂಗಡಿ ಸ್ಥಾಪಿಸಲಾಗುವುದು ಎಂದು ಸಮಾಜಕಲ್ಯಾಣ ಸಚಿವ/ ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಭರವಸೆ ನೀಡಿದರು..
ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಸಂತ ಸೇವಾ ಲಾಲ್ ಕ್ಷೇತ್ರ ಅಭಿವೃದ್ಧಿ ಮತ್ತು ನಿರ್ವಹಣಾ ಪ್ರತಿಷ್ಠಾನದ 3ನೇ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ 3,300 ತಾಂಡಗಳಿದ್ದು, ಲಂಬಾಣಿ ಸಮುದಾಯವು ತಾಂಡಗಳಲ್ಲಿ ಇರುವುದರಿಂದ ಪಡಿತರ ಪಡೆಯಲು ದಿನದ ಕೆಲಸ ಬಿಟ್ಟು ಬರಬೇಕಾಗುತ್ತದೆ. 100 ಪಡಿತರ ಚೀಟಿ ಹೊಂದಿರುವ ಎಲ್ಲಾ ತಾಂಡಗಳಲ್ಲಿ ನ್ಯಾಯಬೆಲೆ ಅಂಗಡಿ ಸ್ಥಾಪಿಸಿ, ಲಂಬಾಣಿ ಸಮುದಾಯದವರಿಗೆ ಪರವಾಗಿಗೆ ನೀಡಲಾಗುವುದು ಎಂದರು.
ಈ ಹಿಂದೆ ತಾವು ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿದ್ದ ಅವಧಿಯಲ್ಲಿ ಅನೇಕ ಸೌಲಭ್ಯಗಳನ್ನು ಕಲ್ಪಿಸಲು ಆದೇಶ ಹೊರಡಿಸಲಾಗಿತ್ತು. ವಿದ್ಯುತ್ ಸಂಪರ್ಕ ಹೊಂದಿಲ್ಲದ ತಾಂಡಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು. ಅರ್ಹ ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುತ್ತೇವೆ. ಈ ಕುರಿತು ಪ್ರಸ್ತಾವನೆ ಸಿದ್ಧಪಡಿಸಿ ಶೀಘ್ರವೇ ಸಲ್ಲಿಸುವಂತೆ ತಾಂಡ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದರು.
ಕೋವಿಡ್ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಗೆ ವಲಸೆ ಹೋದವರು ಮರಳಿ ತಮ್ಮ ತಾಂಡಗಳಿಗೆ ಬಂದಿರುವವರಿಗೆ ಜೀವನ ನಿರ್ವಹಣೆಗೆ ಕೆಲಸ ದೊರಕಬೇಕಿದೆ. ಇದಕ್ಕಾಗಿ ತಾಂಡ ಅಭಿವೃದ್ಧಿ ನಿಗಮವು ಪ್ರಸಕ್ತ ಸಾಲಿನ ಕ್ರಿಯಾ ಯೋಜನೆ ತಯಾರಿಸಬೇಕು. ಶೋಷಿತರ, ಬಡವರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು. ಲಂಬಾಣಿ ಸಮುದಾಯದ ಏಳಿಗೆಗೆ ಶ್ರಮಿಸಲಾಗುವುದು. ಪ್ರತಿಷ್ಠಾನದ ಎಲ್ಲಾ ಸದಸ್ಯರು, ಅಧಿಕಾರಿಗಳು ಸಮುದಾಯದ ಕಲ್ಯಾಣಕ್ಕಾಗಿ ಶ್ರಮಿಸಬೇಕು ಎಂದು ತಿಳಿಸಿದರು.
ಸಂತ ಸೇವಾಲಾಲ್ ಅವರ ಜನ್ಮಸ್ಥಳವಾದ ಸೂರಗೊಂಡನಕೊಪ್ಪದ ಮಹಾಮಠದ ಕಾರ್ಯಕ್ಷೇತ್ರ ಮತ್ತು ಬೋಧನಾ ಸ್ಥಳಗಳ ಅಭಿವೃದ್ಧಿ, ನಿರ್ವಹಣೆ, ಯಾತ್ರಾತ್ರಿಗಳಿಗೆ ಮತ್ತು ಪ್ರವಾಸಿಗರಿಗೆ ಯಾತ್ರಿನಿವಾಸ ಸೇರಿದಂತೆ ಸರ್ವತೋಮುಖ ಅಭಿವೃದ್ಧಿಗೆ ಅನೇಕ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕ್ಷೇತ್ರದ ಸುತ್ತಮುತ್ತಲಿನ ಕೆರೆಗಳ ಅಭಿವೃದ್ದಿ, ಮಹಾಮಠಕ್ಕೆ ಹೊಂದಿಕೊಂಡಿರುವ ಅರಣ್ಯವನ್ನು ಪರಿಸರ ಪ್ರವಾಸೋದ್ಯಮವನ್ನಾಗಿ ಅಭಿವೃದ್ಧಿ ಪಡಿಸಲಾಗುವುದು. ಮದ್ಯ ವ್ಯಸನಿಗಳಿಗೆ ಮದ್ಯಪಾನ ಮುಕ್ತಗೊಳಿಸಲು ಒಂದು ಕೋಟಿ ರೂ. ವೆಚ್ಚದಲ್ಲಿ ಮದ್ಯವರ್ಜನ ಕೇಂದ್ರ (ಡಿ ಅಡಿಕ್ಷನ್ ಸೆಂಟರ್) ಕಟ್ಟಗಳನ್ನು ನಿರ್ಮಿಸಲಾಗುತ್ತಿದೆ. ಈ ಎಲ್ಲಾ ಕಾಮಗಾರಿಗಳನ್ನು ತ್ವರಿತವಾಗಿ ಹಾಗೂ ಗುಣಮಟ್ಟದಲ್ಲಿ ಪೂರ್ಣಗೊಳಿಸಿ, ಸದ್ಬಳಕೆ ಆಗುವಂತೆ ಕ್ರಮಕೈಗೊಳ್ಳಿ ಎಂದು ಡಿಸಿಎಂ ಅಧಿಕಾರಿಗಳಿಗೆ ಸೂಚಿಸಿದರು.
ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್ ಅವರು ತಾಂಡ ಅಭಿವೃದ್ಧಿ ನಿಮಗ ಹಾಗೂ ಈ ಪ್ರತಿಷ್ಠಾನದ ಕಾರ್ಯಕ್ರಮಗಳ ಕುರಿತು ವಿವರಿಸಿದರು. ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ರವಿಕುಮಾರ್ ಸುರಪುರ್, ಪ್ರತಿಷ್ಠಾನದ ಸದಸ್ಯರು, ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು.