ಮಾಜಿ ಸಚಿವ ಸಿ.ಪಿ.ಯೋಗೀಶ್ವರ್ ಮಾಧ್ಯಮದವರೊಂದಿಗೆ ಮಾತನಾಡಿದರು. ಬೆಂಗಳೂರು:ಡಿಸಿಎಂ ಡಿ.ಕೆ.ಶಿವಕುಮಾರ್ ಇತ್ತೀಚೆಗೆ ತುಂಬಾ ವೈಲ್ಡ್ ಆಗುತ್ತಿದ್ದಾರೆ. ಅವರು ಕಾಡಾನೆಯಂತೆ ಆಗುತ್ತಿದ್ದಾರೆ. ಯಾವಾಗ ಖೆಡ್ಡಾಕ್ಕೆ ಬೀಳ್ತಾರೆ ಅಂತ ನೋಡಬೇಕು. ಸಂಕ್ರಾಂತಿಗೆ ಸರ್ಕಾರದಲ್ಲಿ ಹೊಸ ಬದಲಾವಣೆಯಾಗಲಿದೆ. ಈ ಸರ್ಕಾರ ಪತನವಾದರೆ ಅದಕ್ಕೆ ಬಿಜೆಪಿ ಮೇಲೆ ಅನಗತ್ಯ ಆಪಾದನೆ ಮಾಡಬೇಡಿ. ನಿಮ್ಮ ಸರ್ಕಾರದಲ್ಲಿ ಏನೇ ವ್ಯತ್ಯಾಸವಾದರೂ ಅದಕ್ಕೆ ನಿಮ್ಮವರೇ ಕಾರಣ ಹೊರತು ಬಿಜೆಪಿಯವರಲ್ಲ ಎಂದು ಮಾಜಿ ಸಚಿವ ಸಿ.ಪಿ.ಯೋಗೀಶ್ವರ್ ಟಾಂಗ್ ನೀಡಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯನ್ನು ನಾನು ಗಮನಿಸಿದ್ದೇನೆ. ರಾಮನಗರ ಜಿಲ್ಲೆ ಆಡಳಿತಾತ್ಮಕವಾಗಿ ಈಗ ಸರಿಯಿದೆ. ನಾವೆಲ್ಲ ಬೆಂಗಳೂರಿನವರೇ. ಒಂದು ಕಾಲದಲ್ಲಿ ಬೆಂಗಳೂರು ಬೆಳೆದಿರಲಿಲ್ಲ. ಬೆಂಗಳೂರು ಬೆಳೆಯುತ್ತಿದ್ದಂತೆ ಒತ್ತಡ ಕಮ್ಮಿ ಮಾಡಲು ಜಿಲ್ಲೆಗಳಾದವು. ಈಗ ರಾಮನಗರ ಜಿಲ್ಲೆ ಇರುವುದು ಆಡಳಿತಾತ್ಮಕವಾಗಿ ಸರಿ ಇದೆ. ಅದು ಹಾಗೆಯೇ ಇರಬೇಕು. ರಾಮನಗರವನ್ನೇ ಅಭಿವೃದ್ಧಿ ಮಾಡಲಿ ಎಂದು ಹೇಳಿದರು.
ಕನಕಪುರ ರಾಮನಗರದಲ್ಲೇ ಇರಲಿ: ಕನಕಪುರ ರಾಮನಗರದಲ್ಲೇ ಇದ್ದರೆ ಯಾರಿಗೂ ತೊಂದರೆ ಇಲ್ಲ. ಇದನ್ನು ರಾಜಕೀಕರಣಗೊಳಿಸುವುದು ಬೇಡವಾಗಿತ್ತು. ಇದನ್ನು ಡಿಕೆಶಿ ಮತ್ತು ಹೆಚ್‌ಡಿಕೆ ಪ್ರತಿಷ್ಠೆ ಅನ್ನೋದಕ್ಕಿಂತ ಕನಕಪುರ ರಾಮನಗರದಲ್ಲೇ ಇರಲಿ. ಶಿವಕುಮಾರ್ ರಿಯಲ್ ಎಸ್ಟೇಟ್ ಅನ್ನು ಮನಸಲ್ಲಿಟ್ಕೊಂಡು ಮಾತನಾಡುತ್ತಿದ್ದಾರೆ. ಅವರ ಭೂದಾಹ ಇನ್ನೂ ಮುಗಿದಿಲ್ಲ ಅನ್ನಿಸುತ್ತದೆ ಎಂದು ಟೀಕಿಸಿದರು.
ಬೆಳಗಾವಿ ಕಾಂಗ್ರೆಸ್‌ನಲ್ಲಿ ಬಣ ರಾಜಕಾರಣ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಿ.ಪಿ.ಯೋಗೀಶ್ವರ್, ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಪ್ರಾರಂಭದ ದಿನಗಳಿಂದಲೂ ಡಿ.ಕೆ.ಶಿವಕುಮಾರ್ ಬೆಳೆಸಿದವರು. ಈಗ ಹೆಬ್ಬಾಳ್ಕರ್ ರಾಜ್ಯದಲ್ಲಿ ಬಹಳ ಎತ್ತರಕ್ಕೆ ಬೆಳೆದಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಲಕ್ಷ್ಮಿ ಅವರ ವಿಚಾರದಲ್ಲಿ ಬಹಳ ಒಲವು ತೋರಿಸುತ್ತಿದ್ದು, ಇದರಿಂದ ರಾಜಕೀಯದಲ್ಲಿ ಬಹಳ ವ್ಯತ್ಯಾಸಗಳು ಆಗುತ್ತಿವೆ. ಇದನ್ನು ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಇದು ರಾಜಕೀಯ ಬೆಂಕಿಯಾಗಿ ಹೊತ್ಕೊಂಡಿದೆ, ಮುಂದೆ ಏನಾಗುತ್ತದೆ ಎಂಬುದನ್ನು ಕಾದುನೋಡಬೇಕು ಎಂದರು.
ಇದನ್ನೂಓದಿ:ರಾಮನಗರ ಬೆಂಗಳೂರಿಗೆ ಸೇರಿಸುವ ವಿಚಾರ ನನಗೆ ಗೊತ್ತಿಲ್ಲ : ಸಿಎಂ ಸಿದ್ದರಾಮಯ್ಯ