ಬೆಂಗಳೂರು:ವರ್ಷದ ಮೊದಲ ಸುಗ್ಗಿ ಹಬ್ಬವಾದ ಸಂಕ್ರಾಂತಿಯ ಸಂಭ್ರಮ ಸಿಲಿಕಾನ್ ಸಿಟಿಯಲ್ಲಿ ಮನೆ ಮಾಡಿದ್ದು, ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳ ಖರೀದಿಗೆ ಜನರು ಮಾರುಕಟ್ಟೆಗಳತ್ತ ಮುಖ ಮಾಡಿದ್ದಾರೆ. ಬೆಲೆ ಏರಿಕೆ ಬಿಸಿ ತಟ್ಟಿದ್ದರೂ ಹಬ್ಬಕ್ಕೆ ಬೇಕಾದ ಕಬ್ಬು, ಕಡಲೆಕಾಯಿ, ಅವರೆಕಾಯಿ, ಗೆಣಸುಗಳ, ಎಳ್ಳು, ಬೆಲ್ಲಗಳನ್ನು ನಗರದ ಕೆ.ಆರ್. ಮಾರುಕಟ್ಟೆ ಸೇರಿದಂತೆ ಹಲವು ಮಾರುಕಟ್ಟೆಗಳು ಗಿಜಿಗುಡುತ್ತಿದೆ.
ನಗರದ ಮಲ್ಲೇಶ್ವರ, ಗಾಂಧಿ ಬಜಾರ್, ಜಯನಗರ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ 2 ರೀತಿಯ ಕಬ್ಬಿನ ತಳಿಗಳು ಕಂಡು ಬರುತ್ತಿದ್ದು, ಕಪ್ಪು ಕಬ್ಬಿಗೆ ಹೆಚ್ಚಿದ ಬೇಡಿಕೆ ಕಂಡು ಬರುತ್ತಿದೆ. ಒಂದು ಕಟ್ಟಿಗೆ 300 ರಿಂದ 500 ರೂಪಾಯಿ ನಿಗದಿಯಾಗಿದೆ. ಕಬ್ಬು ಜೋಡಿಗೆ 100 - 150 ರೂ.ಗೆ ಮಾರಾಟವಾಗುತ್ತಿದೆ. ಇನ್ನು ಹೂವು ಹಣ್ಣುಗಳ ಬೆಲೆಯೂ ಸಹ ತುಸು ಹೆಚ್ಚಾಗಿದೆ.
ಮೊದಲೆಲ್ಲ ಹಬ್ಬಕ್ಕೆ ಇನ್ನೂ ಕೆಲ ದಿನ ಬಾಕಿ ಇರುವಾಗಲೆ ಹಿರಿಯರು ಮನೆಯಲ್ಲೆ ಕಡಲೆಬೀಜ, ಎಳ್ಳು, ಹುರಿದು, ಕೊಬ್ಬರಿ ಹಾಗೂ ಬೆಲ್ಲ ಹೆಚ್ಚಿಟ್ಟುಕೊಂಡು ಸಾಂಪ್ರದಾಯಿಕವಾಗಿ ಮಿಶ್ರಣ ಮಾಡಿ ಹಬ್ಬದ ದಿನ ಎಳ್ಳು - ಬೆಲ್ಲ ಬೀರುತ್ತಾರೆ. ಆದರೆ, ಇಂದು ತಯಾರಿಸುವ ಗೊಜಿಗೆ ಹೋಗದೇ, ಜನರು ಮಾರುಕಟ್ಟೆಯಲ್ಲಿ ಸಿದ್ಧ ಎಳ್ಳು- ಬೆಲ್ಲ ಮಿಶ್ರಣವನ್ನು ಕೆಜಿಗೆ 250 ರಿಂದ 360 ರೂ.ಗೆ ಖರೀದಿಸುತ್ತಿದ್ದಾರೆ.
ಸೇವಂತಿಗೆ ಕೆಜಿಗೆ 400 ರಿಂದ 500 ರೂ, ಮೈಸೂರು ಮಲ್ಲಿಗೆ ಕೆಜಿಗೆ 600 ರಿಂದ 750 ರೂ. ಕಾಕಡಾ ಕೆಜಿಗೆ 100 ರಿಂದ 150ರೂ. ಚೆಂಡು ಹೂವು ಕೆಜಿಗೆ 100 ರಿಂದ 180 ರೂ. ಹಾಗೂ ಏಲಕ್ಕಿಬಾಳೆ 100 ರಿಂದ 120 ರೂ, ಸೇಬು ಹಣ್ಣು ಕೆಜಿಗೆ 100 ರಿಂದ 180 ರೂ.ಗೆ ಮಾರಾಟವಾಗುತ್ತಿದೆ.