ಬೆಂಗಳೂರು:ಈಗಾಗಲೇ ಗಡಿಗಳು ನಿಗದಿಯಾಗಿದ್ದರೂ ತಿಳುವಳಿಕೆ ಇರುವಂತಹ ಶಿವಸೇನೆ ವಕ್ತಾರ ಸಂಜಯ್ ರಾವತ್ ಅನಗತ್ಯವಾಗಿ ಗಡಿಯಂತಹ ಸೂಕ್ಷ್ಮ ವಿಷಯ ಕೈಗೆತ್ತಿಕೊಂಡು ಅವರನ್ನು ಅವರೇ ಅವಲಕ್ಷಣ ಮಾಡಿಕೊಳ್ಳುತ್ತಿದ್ದಾರೆ ಎಂದು ಡಿಸಿಎಂ ಅಶ್ವತ್ಥನಾರಾಯಣ್ ಟಾಂಗ್ ನೀಡಿದ್ದಾರೆ.
ಮಲ್ಲೇಶ್ವರಂನಲ್ಲಿ ಭಗವತ್ ಮಧ್ವಾಚಾರ್ಯರ ಪ್ರತಿಮೆ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಹಾರಾಷ್ಟ್ರ-ಕರ್ನಾಟಕ ಗಡಿ ವಿಚಾರವಾಗಿ ಪದೇ ಪದೇ ರಾಜಕೀಯ ಪ್ರೇರಿತ ಹೇಳಿಕೆ ನೀಡಿ ಜನರನ್ನು ಭಾವನಾತ್ಮಕವಾಗಿ ಕೆರಳಿಸುವ ಕೆಲಸವನ್ನು ಕೈಬಿಡಬೇಕು. ಈಗಾಗಲೇ ಒಂದು ನಿಗದಿತ ಗಡಿ ನಿಶ್ಚಯ ಆಗಿದೆ. ಈ ವಿಚಾರವನ್ನು ಮತ್ತೆ ಮತ್ತೆ ಪ್ರಸ್ತಾಪಿಸುವುದು ಅನಗತ್ಯ. ಇಂಥ ವಿಷಯ ಬಿಟ್ಟು, ಮಾಡಬೇಕಿರುವ ಉತ್ತಮ ಕಾರ್ಯಗಳನ್ನು ಕೈಗೆತ್ತಿಕೊಂಡರೆ ಒಳ್ಳೆಯದು ಎಂದರು.
ಮಾನವೀಯತೆಗೆ, ಒಳ್ಳೆಯ ಕಾರ್ಯಗಳಿಗೆ ಗಡಿ ಇಲ್ಲ. ಕರ್ನಾಟಕ ಮತ್ತು ಮಹಾರಾಷ್ಟ್ರದ ಜನ ಸೌಹಾರ್ದತೆಯಿಂದ ಬಾಳುತ್ತಿದ್ದೇವೆ. ಅನಗತ್ಯ ವಿವಾದ ಎಳೆದು ತಂದು ಸಮಾಜದ ಶಾಂತಿ ಹಾಳುಗೆಡುವಬಾರದು. ಸಾಮಾಜಿಕ, ಆರ್ಥಿಕ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಎರಡು ರಾಜ್ಯಗಳು ಒಟ್ಟಿಗೆ ಕೆಲಸ ಮಾಡಬೇಕಿದೆ. ಪ್ರಗತಿಗೆ ಅಡ್ಡಿಯಾಗುವಂಥ ಕೆಲಸವನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.