ಬೆಂಗಳೂರು: ಕೊರೋನಾ ನಂತರ ದೇಶದ ಜನಜೀವನ, ಪರಿಸ್ಥಿತಿಗಳ ಅಧ್ಯಯನ ಹಾಗೂ ರಸ್ತೆ ಸುರಕ್ಷತೆ ಕುರಿತು ಅರಿವು ಮೂಡಿಸಲು ನಗರದ ಎನ್.ಎ ಸಂದೀಪ್ ಏಕಾಂಗಿಯಾಗಿ ದೇಶಾದ್ಯಂತ 21 ಸಾವಿರ ಕಿಲೋ ಮೀಟರ್ ಪ್ರಯಾಣ ಮಾಡುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ಈ ಕುರಿತು ಪ್ರೆಸ್ ಕ್ಲಬ್ ನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಅನುಭವವನ್ನು ಹಂಚಿಕೊಂಡ ಸಂದೀಪ್. 32 ವರ್ಷ ಹಳೆಯ ಯಜ್ಡಿ ರೋಡ್ ಕಿಂಗ್ ದ್ವಿಚಕ್ರವಾಹನದಲ್ಲಿ 60 ದಿನಗಳ ಕಾಲ ಪ್ರಯಾಣ ಮಾಡಿ 21 ಸಾವಿರ ಕಿ.ಮೀ ಕ್ರಮಿಸಿ ವಾಪಸಾಗಿದ್ದಾರೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮವನ್ನು ದೇಶದ ಗಡಿಕಾಯುವ ಸೈನಿಕರೊಂದಿಗೆ ಆಚರಿಸುವ ಉದ್ದೇಶದಿಂದ ಭಾರತ - ಪಾಕಿಸ್ತಾನ, ಭಾರತ- ಚೀನಾ, ಭಾರತ-ಮ್ಯನ್ಮಾರ್ ಹಾಗೂ ಭಾರತ-ನೇಪಾಳ ಗಡಿಗಳಿಗೆ ಭೇಟಿ ನೀಡಿ ಅಲ್ಲಿ ಕರ್ತವ್ಯದಲ್ಲಿ ಸೈನಿಕರೊಂದಿಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮ ಆಚರಿಸಿದೆ ಎಂದರು.
ಅಪಘಾತ ಅವಘಡದಲ್ಲಿ ಯುವಕರೇ ಹೆಚ್ಚು: ದಿನೇ ದಿನೆ ಹೆಚ್ಚುತ್ತಿರುವ ಅಪಘಾತದಲ್ಲಿ ಅಮಾಯಕ ಜೀವಗಳು ಬಲಿಯಾಗುತ್ತಿವೆ. ಇದರಲ್ಲಿ ಯುವಕರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿರುವುದು ಆತಂಕದ ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ ಅಪಘಾತ ರಹಿತ ಸುರಕ್ಷಿತ ಪ್ರಯಾಣ ಹಾಗೂ ರಸ್ತೆ ಸುರಕ್ಷತೆ ಕುರಿತು ಯುವ ಜನಾಂಗದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ಸಾಹಸಕ್ಕೆ ಕೈಹಾಕಿದೆ ಎಂದರು.
ದೇಶದಲ್ಲಿ 4 ಲಕ್ಷ 3116 ರಸ್ತೆ ಅಪಘಾತಗಳು: ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೊ (ಎನ್ಸಿಆರ್ಬಿ) ವರದಿ ಪ್ರಕಾರ 2021ರಲ್ಲಿ ದೇಶಾದ್ಯಂತ 4 ಲಕ್ಷ 3116 ರಸ್ತೆ ಅಪಘಾತಗಳು ಸಂಭವಿಸಿದ್ದು, 1 ಲಕ್ಷ 55,622 ಮಂದಿ ಸಾವನಪ್ಪಿದ್ದು, 3 ಲಕ್ಷ 71,884 ಮಂದಿ ಗಾಯಗೊಂಡಿದ್ದಾರೆ.
ಜಗತ್ತಿನಲ್ಲಿಯೇ ಹೆಚ್ಚು ಯುವ ಸಮುದಾಯ ಹೊಂದಿರುವ ಭಾರತ ಇಂದು ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸುತ್ತಿದೆ. ಈ ಸಂದರ್ಭದಲ್ಲಿ ದೇಶದ ಅಮೂಲ್ಯ ಆಸ್ತಿಯಾದ ಯುವ ಜನಾಂಗದ ಜೀವ ರಕ್ಷಣೆ ಪ್ರತಿಯೊಬ್ಬ ಭಾರತಿಯರ ಕರ್ತವ್ಯ ಆ ಕಾರಣದಿಂದ ಯುವ ಜನಾಂಗದಲ್ಲಿ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸಲು ದ್ವಿಚಕ್ರ ವಾಹನದಲ್ಲಿ ಭಾರತ ದರ್ಶನ ಯಾತ್ರೆ ನಡೆಸಿರುವುದಾಗಿ ತಿಳಿಸಿದರು.
ಇದನ್ನೂ ಓದಿ:ದಟ್ಟ ಮಂಜಿನಿಂದ ಅವಾಂತರ.. ಮರಕ್ಕೆ ಕಾರು ಡಿಕ್ಕಿಯಾಗಿ ನಾಲ್ವರು ದುರ್ಮರಣ