ಬೆಂಗಳೂರು : ವರದಕ್ಷಿಣೆಗಾಗಿ ಕಿರುಕುಳ ನೀಡಿದ ಆರೋಪದಡಿ ಜೈಲು ಶಿಕ್ಷೆಗೊಳಗಾಗಿದ್ದ ಸ್ಯಾಂಡಲ್ವುಡ್ನ ಹಿರಿಯ ನಟಿ ಅಭಿನಯ ಅವರು ಬಂಧನ ಭೀತಿ ಎದುರಿಸುತ್ತಿದ್ದು, ಇದೀಗ ಪರಾರಿ ಆಗಿದ್ದಾರೆ. ಇದೀಗ ಇವರ ವಿರುದ್ಧ ಚಂದ್ರಾ ಲೇಔಟ್ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ.
ತನ್ನ ಅಣ್ಣನ ಹೆಂಡತಿ ಲಕ್ಷ್ಮೀದೇವಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ಪ್ರಕರಣದ ಐದನೇ ಆರೋಪಿಯಾಗಿರುವ ಅಭಿನಯ, ತಾಯಿ ಜಯಮ್ಮ ಹಾಗೂ ಚೆಲುವರಾಜ್ ಎಂಬುವರಿಗೆ ಹೈಕೋರ್ಟ್ ಶಿಕ್ಷೆ ವಿಧಿಸಿದ್ದು, ಬಂಧಿಸುವಂತೆ ಪೊಲೀಸರಿಗೆ ಆದೇಶಿಸಿತ್ತು. ಈ ಆದೇಶದ ಬಗ್ಗೆ ಮೇಲ್ಮನವಿ ಸಲ್ಲಿಸುವುದಾಗಿ ಅಭಿನಯ ಈ ಹಿಂದೆ ಹೇಳಿದ್ದರು.
ಇದಾದ ಕೆಲವು ದಿನಗಳ ಬಳಿಕ ಕಣ್ಮರೆಯಾಗಿದ್ದು, ಪೊಲೀಸರು ಸತತವಾಗಿ ಶೋಧ ನಡೆಸಿದರೂ ಅಭಿನಯ ಹಾಗೂ ಕುಟುಂಬಸ್ಥರು ಪತ್ತೆಯಾಗಿಲ್ಲ. ಅಪರಾಧಿಗಳ ಬಗ್ಗೆ ಮಾಹಿತಿ ಸಿಕ್ಕರೆ ಚಂದ್ರಾ ಲೇಔಟ್ ಪೊಲೀಸರಿಗೆ ತಿಳಿಸುವಂತೆ ಡಿಸಿಪಿ ಲಕ್ಷ್ಮಣ್ ನಿಂಬರಗಿ ಮನವಿ ಮಾಡಿದ್ದಾರೆ.