ಕರ್ನಾಟಕ

karnataka

By

Published : Aug 12, 2023, 12:01 PM IST

Updated : Aug 12, 2023, 3:57 PM IST

ETV Bharat / state

ಮಹಿಳೆ ಮೇಲೆ ಅತ್ಯಾಚಾರ, ಹಣ ವಸೂಲಿ ಆರೋಪ: ಸ್ಯಾಂಡಲ್​ವುಡ್​ ನಿರ್ಮಾಪಕನ ಬಂಧನ

ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಲ್ಲದೇ, ಹಣ ವಸೂಲಿ ಮಾಡಿದ ಆರೋಪದ ಮೇಲೆ ಸ್ಯಾಂಡಲ್​ವುಡ್​ ನಿರ್ಮಾಪಕನನ್ನು ಪೊಲೀಸರು ಬಂಧಿಸಿದ್ದಾರೆ.

sandalwood-producer-arrested-alleged-rape-case
ಮಹಿಳೆ ಮೇಲೆ ಅತ್ಯಾಚಾರ, ಹಣ ವಸೂಲಿ ಆರೋಪ: ಸ್ಯಾಂಡಲ್​ವುಡ್​ ನಿರ್ಮಾಪಕನ ಬಂಧನ

ಲಕ್ಷ್ಮೀ ಪ್ರಸಾದ್, ಈಶಾನ್ಯ ವಿಭಾಗದ ಡಿಸಿಪಿ

ಬೆಂಗಳೂರು :ಮಹಿಳೆ ಮೇಲೆ ಅತ್ಯಾಚಾರ ನಡೆಸಿ, ಹಣ ವಸೂಲಿ ಮಾಡಿದ ಆರೋಪದಡಿ ಕೊಡಿಗೆಹಳ್ಳಿ ಠಾಣೆ ಪೊಲೀಸರು ಕನ್ನಡ ಚಿತ್ರರಂಗದಲ್ಲಿ 'ಸ್ವಯಂಕೃಷಿ' ಎಂಬ ಚಿತ್ರ ನಿರ್ಮಾಣ ಮಾಡಿ, ನಟಿಸಿದ್ದ ವೀರೇಂದ್ರ ಬಾಬು ಎಂಬುವರನ್ನು ಬಂಧಿಸಿದ್ದಾರೆ. ನಿರ್ಮಾಪಕ ತನ್ನ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗಿ, ಅದರ ವಿಡಿಯೋ ಸೆರೆ ಹಿಡಿದುಕೊಂಡು ಬೆದರಿಕೆ ಹಾಕಿದ್ದಾರೆ ಹಾಗೂ 15 ಲಕ್ಷ ರೂ. ಹಣ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಿ 36 ವರ್ಷದ ಮಹಿಳೆಯೊಬ್ಬರು ಕೊಡಿಗೆಹಳ್ಳಿ ಪೊಲೀಸ್​ ಠಾಣೆಯಲ್ಲಿ ಇತ್ತೀಚೆಗೆ ದೂರು ದಾಖಲಿಸಿದ್ದರು.

ದೂರಿನ ಮಾಹಿತಿ:ದೂರುದಾರ ಮಹಿಳೆಯು 2021ರ ನವೆಂಬರ್‌ನಲ್ಲಿ ಕೆಲಸವೊಂದರ ನಿಮಿತ್ತ ವೀರೇಂದ್ರ ಬಾಬುನನ್ನು ಭೇಟಿಯಾಗಿದ್ದರು. ಆ ಸಂದರ್ಭದಲ್ಲಿ ಕಾಫಿಯಲ್ಲಿ ಮತ್ತೇರಿಸುವ ಔಷಧ ಸೇರಿಸಿ ಕುಡಿಸಿ ಅತ್ಯಾಚಾರ ಎಸಗಿದ್ದು, ವೀರೇಂದ್ರ ಬಾಬು ಕೃತ್ಯವನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದ. ಬಳಿಕ ಆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿ 15 ಲಕ್ಷ ರೂ. ಹಣ ಪೀಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು.

ಒಡವೆ ಮಾರಾಟ ಮಾಡಿ ಹಣ ನೀಡಿದ್ದ ದೂರುದಾರ ಮಹಿಳೆ ತನ್ನ ಘನತೆಗೆ ಧಕ್ಕೆ ಬರಬಾರದು ಎಂದು ಸುಮ್ಮನಾಗಿದ್ದರು. ಆದರೆ, ಜುಲೈ 30ರಂದು ದೂರುದಾರಳಿಗೆ ಬೆದರಿಸಿದ್ದ ವೀರೇಂದ್ರ ಬಾಬು ಆಕೆಯನ್ನು ಪುನಃ ತನ್ನ ಬಳಿ ಕರೆಯಿಸಿಕೊಂಡಿದ್ದಾನೆ. ಬಳಿಕ ತನ್ನ ಸ್ನೇಹಿತರಾದ ನಿರಂಜನ್ ರಾವ್, ಬಸವರಾಜ್, ಶಿವಕುಮಾರ್, ದೀಕ್ಷಿತ್ ನೆರವಿನಿಂದ ಮಹಿಳೆಯನ್ನು ತನ್ನ ಕಾರಿನಲ್ಲಿ ಕೂರಿಸಿಕೊಂಡು ವಿವಿಧ ಕಡೆ ಸುತ್ತಾಡಿಸಿ, ಆಕೆಯ ಮೈಮೇಲಿದ್ದ ಚಿನ್ನಾಭರಣ ಕಿತ್ತುಕೊಂಡಿದ್ದಾನೆ. ಪಿಸ್ತೂಲ್ ತಲೆಗೆ ಇಟ್ಟು ಬೆದರಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸದ್ಯ ಸಂತ್ರಸ್ತ ಮಹಿಳೆ ನೀಡಿರುವ ದೂರಿನ ಮೇರೆಗೆ ವೀರೇಂದ್ರ ಬಾಬು, ನಿರಂಜನ್ ರಾವ್, ಬಸವರಾಜ್, ಶಿವಕುಮಾರ್ ಹಾಗೂ ದೀಕ್ಷಿತ್ ಎಂಬುವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಆರೋಪಿ ನಿರ್ಮಾಪಕ ವೀರೇಂದ್ರ ಬಾಬುನನ್ನು ಬಂಧಿಸಿ ತನಿಖೆ ಮುಂದುವರೆಸಲಾಗಿದೆ ಎಂದು ಕೊಡಿಗೆಹಳ್ಳಿ ಠಾಣೆ ಪೊಲೀಸರು ತಿಳಿಸಿದ್ದಾರೆ‌.

'ಆರೋಪಿ ವಿರೇಂದ್ರ ಬಾಬು 2021ರಲ್ಲಿ ಸಂತ್ರಸ್ತ ಮಹಿಳೆಗೆ ಪರಿಚಯವಾಗಿದ್ದ. ಬಳಿಕ ಮಹಿಳೆಯನ್ನು ಮನೆಗೆ ಕರೆದು ಕಾಪಿಯಲ್ಲಿ ಏನೋ ಮಿಕ್ಸ್ ಮಾಡಿ ಮೂರ್ಛೆ ಬರಿಸಿ ಅತ್ಯಾಚಾರ ಎಸಗಿದ್ದ. ನಂತರ ಬ್ಲ್ಯಾಕ್ ಮೇಲ್ ಮಾಡಿ 15 ಲಕ್ಷ ರೂ ದೋಚಿದ್ದ. ಕಳೆದ ತಿಂಗಳು ಮಹಿಳೆ ಬೆಂಗಳೂರಿಗೆ ಆಗಮಿಸಿದಾಗ ಕಾರಿನಲ್ಲಿ ಕೂರಿಸಿಕೊಂಡು ಹಣ ಮತ್ತು ಚಿನ್ನ ದೋಚಿ, ಪೊಲೀಸರಿಗೆ ಹೇಳದಂತೆ ಬೆದರಿಕೆ ಹಾಕಿದ್ದ ಬಗ್ಗೆ ದೂರು ದಾಖಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿ ತನಿಖೆ ಕೈಗೊಂಡಿದ್ದೇವೆ' - ಲಕ್ಷ್ಮೀ ಪ್ರಸಾದ್, ಈಶಾನ್ಯ ವಿಭಾಗದ ಡಿಸಿಪಿ

ಈ ಹಿಂದೆ ಕಳೆದ ವರ್ಷ ಜುಲೈನಲ್ಲಿ ಚುನಾವಣೆಯಲ್ಲಿ ಟಿಕೆಟ್​ ಕೊಡಿಸುವುದಾಗಿ 1 ಕೋಟಿ 88 ಲಕ್ಷ ರೂ. ಹಣ ಪಡೆದು ವಂಚಿಸಿದ ಆರೋಪದ ಮೇಲೆ ವೀರೇಂದ್ರ ಬಾಬುನನ್ನು ಬಂಧಿಸಲಾಗಿತ್ತು. ಬಾಬು ವಿರುದ್ಧ ಬಸವರಾಜ ಘೋಷಾಲ್ ಎಂಬುವರು ನೀಡಿದ ದೂರಿನ ಅನ್ವಯ ಕೊಡಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ:ಬೆಂಗಳೂರಲ್ಲಿ ಯುವತಿ ಹತ್ಯೆ ಮಾಡಿ ಮನೆ ಎದುರು ಎಸೆದ ಪ್ರಕರಣ: ಪಕ್ಕದ ಮನೆಯಲ್ಲೇ ಇದ್ದ ಆರೋಪಿ ಬಂಧನ

Last Updated : Aug 12, 2023, 3:57 PM IST

ABOUT THE AUTHOR

...view details