ಬೆಂಗಳೂರು:ಬೀಗ ಹಾಕಿದ ಒಂಟಿ ಮನೆಗಳನ್ನೇ ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದ ಕುಖ್ಯಾತ ಖದೀಮನನ್ನ ಬೇಗೂರು ಪೊಲೀಸರು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ನವಾಜ್ ಷರೀಪ್ ಬಂಧಿತ ಚೋರನಾಗಿದ್ದು, ಈತನಿಂದ 350 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿಕೊಳ್ಳಲಾಗಿದೆ. ಸುಮಾರು 25 ವರ್ಷಗಳಿಂದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಹಲವು ಬಾರಿ ಜೈಲಿಗೆ ಹೋಗಿ ಬಂದಿದ್ದರೂ ಪ್ರತಿ ಬಾರಿಯೂ ಜಾಮೀನು ಪಡೆದು ಹೊರ ಬರುತ್ತಿದ್ದರು.
ಈ ಕಳ್ಳ ಹೊರಗಡೆ ಬಂದಾಗಲೆಲ್ಲ ಮತ್ತೆ ಹಳೆ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತಿದ್ದ. ರೂಢಿಗತ ಖದೀಮನ ವಿರುದ್ಧ ಬೇಗೂರು ಠಾಣೆಯಲ್ಲಿ 10 ಸೇರಿದಂತೆ ನಗರ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 27 ಕಳವು ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಂಟಿ ಮನೆಯೇ ಈತನ ಟಾರ್ಗೆಟ್ :ಈತನನ್ನುಕಳೆದ ಆರು ತಿಂಗಳ ಹಿಂದೆ ಕಾಮಾಕ್ಷಿಪಾಳ್ಯ ಪೊಲೀಸರು ಕಳ್ಳತನ ಕೃತ್ಯದಲ್ಲಿ ಅರೆಸ್ಟ್ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಕಳೆದ ಎರಡು ತಿಂಗಳ ಹಿಂದೆ ಜಾಮೀನು ಪಡೆದು ಹೊರಬಂದಿದ್ದ ನವಾಜ್ ಮತ್ತೆ ಕಳ್ಳತನ ಕೃತ್ಯಗಳನ್ನ ಎಸಗುತ್ತಿದ್ದ ಎಂಬುದು ತಿಳಿದುಬಂದಿದೆ.
ಈ ಕಳ್ಳ ಬೀಗ ಹಾಕಿದ ಸಣ್ಣಪುಟ್ಟ ಮನೆಗಳನ್ನೇ ಗುರಿಯಾಗಿಸಿಕೊಂಡು ಮನೆಯ ಹೂ ಕುಂಡ, ಕಿಟಕಿಯಲ್ಲಿ ಇಡುತ್ತಿದ್ದ ಬೀಗದ ಕೀ ಹುಡುಕಾಟ ನಡೆಸುತ್ತಿದ್ದ. ಮನೆಯ ಕೀ ಸಿಕ್ಕ ಬಳಿಕ ಸುಲಭವಾಗಿ ಒಳನುಗ್ಗಿ ನಗ-ನಾಣ್ಯ ದೋಚುತ್ತಿದ್ದ. ಕದ್ದ ಚಿನ್ನಾಭರಣ ಮಾರಾಟ ಮಾಡಿ ಬಂದ ಹಣದಲ್ಲಿ ಇಸ್ವೀಟ್ ಆಡುವುದು ಹಾಗೂ ಮದ್ಯಪಾನವೆಸಗಿ ಎಂಜಾಯ್ ಮಾಡುತ್ತಿದ್ದ. 56 ವರ್ಷದ ನವಾಜ್ನ ಕ್ರಿಮಿನಲ್ ಹಿನ್ನೆಲೆ ಕಂಡು ಮನೆಯವರು ದೂರ ತಳ್ಳಿದ್ದರು ಎಂಬುದು ತಿಳಿದು ಬಂದಿದೆ.