ಬೆಂಗಳೂರು: ಸ್ಯಾಂಡಲ್ವುಡ್ ನಟಿ ಸಂಜನಾ ಗಲ್ರಾನಿ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪಾರ್ಕಿಂಗ್ ವಿಚಾರವಾಗಿ ಸ್ಥಳೀಯ ನಿವಾಸಿಗಳೊಂದಿಗೆ ಗಲಾಟೆಯಾಗಿದ್ದು, ತನಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ನ್ಯಾಯಾಲಯದ ಅನುಮತಿ ಮೇರೆಗೆ ಇಂದಿರಾನಗರ ಠಾಣೆಗೆ ದೂರು ಸಲ್ಲಿಸಿದ್ದು, ಎಫ್ಐಆರ್ ದಾಖಲಾಗಿದೆ.
ಘಟನೆಯ ವಿವರ:ನಟಿ ಸಂಜನಾ ಇಂದಿರಾನಗರದ ಧೂಪನಹಳ್ಳಿಯಲ್ಲಿ ವಾಸವಾಗಿದ್ದಾರೆ. ಪಾರ್ಕಿಂಗ್ ವಿಚಾರ ಪ್ರಶ್ನಿಸಿದ್ದಕ್ಕೆ ಅಕ್ಕಪಕ್ಕದವರು ಕೊಲೆ ಬೆದರಿಕೆ ಹಾಕಿ, ಅಶ್ಲೀಲವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಕಳೆದ ಸೆಪ್ಟೆಂಬರ್ 12ರ ಸಂಜೆ ನಡೆದಿರುವ ಘಟನೆಯ ಕುರಿತು ನ್ಯಾಯಾಲಯದ ಅನುಮತಿ ಪಡೆದು ಇಂದಿರಾನಗರ ಠಾಣೆಗೆ ದೂರು ನೀಡಿದ್ದಾರೆ.
ಸಂಜನಾ ಗಲ್ರಾನಿ ನಿವಾಸದ ಪಕ್ಕದಲ್ಲಿಯೇ ಯಶೋಧಮ್ಮ ಹಾಗೂ ರಾಜಣ್ಣ ಎಂಬುವವರ ಮನೆಯೂ ಇದೆ. ಸುಮಾರು ಆರು ವಾಹನಗಳನ್ನು ಹೊಂದಿರುವ ರಾಜಣ್ಣ ಸಾರ್ವಜನಿಕ ರಸ್ತೆಯಲ್ಲಿ ತಮ್ಮ ಕಾರುಗಳನ್ನು ನಿಲ್ಲಿಸಿದ್ದಾರೆ. ಇದರಿಂದಾಗಿ ಅಕ್ಕಪಕ್ಕದವರ ಓಡಾಟಕ್ಕೆ ತೊಂದರೆಯಾಗುತ್ತಿದೆ ಎಂದು ಸಂಜನಾ ಗಲ್ರಾನಿ ಪ್ರಶ್ನಿಸಿದ್ದಾರೆ.