ಗುರುರಾಜ ಕಲ್ಯಾಣ ಮಂಟಪದ ಬಳಿ ಕನ್ನಡ ಚಿತ್ರರಂಗದ ನಟ-ನಟಿಯರಿಂದ ಪ್ರತಿಭಟನೆ ಬೆಂಗಳೂರು: ರಾಜ್ಯದೆಲ್ಲೆಡೆ ವಿವಿಧ ಸಂಘಟನೆಗಳಿಂದ ಕಾವೇರಿ ನೀರಿಗಾಗಿ ನಡೆಯುತ್ತಿರುವ ಬಂದ್ಗೆ ಚಿತ್ರರಂಗ ಕೂಡ ಬೆಂಬಲ ನೀಡಿದೆ. ಕಾವೇರಿಗಾಗಿ ಬೀದಿಗಿಳಿಯಲಿರುವ ಸ್ಯಾಂಡಲ್ವುಡ್ ತಾರೆಯರು, ನಟ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಗುರುರಾಜ್ ಕಲ್ಯಾಣ ಮಂಟಪದಲ್ಲಿ ನಡೆದ ಹೋರಾಟಕ್ಕೆ ಸಾಥ್ ನೀಡಿದರು.
ನಟರಾದ ಶಿವರಾಜ್ ಕುಮಾರ್, ಉಪೇಂದ್ರ, ಶ್ರೀಮುರಳಿ, ದರ್ಶನ್, ಲೂಸ್ ಮಾದ ಯೋಗಿ, ಚಿಕ್ಕಣ್ಣ, ಶ್ರೀನಾಥ್, ಓಂ ಸಾಯಿ ಪ್ರಕಾಶ್, ರಘು ಮುಖರ್ಜಿ, ತಬಲ ನಾಣಿ, ಶ್ರೀಮುರಳಿ ವಿಜಯರಾಘವೇಂದ್ರ, ಶ್ರೀನಿವಾಸ್ ಮೂರ್ತಿ, ನಟಿಯರಾದ ಉಮಾಶ್ರೀ, ಪೂಜಾಗಾಂಧಿ, ಅನು ಪ್ರಭಾಕರ್, ರೂಪಿಕಾ, ಶೃತಿ, ಫಿಲ್ಮ್ ಚೇಂಬರ್ ಸದಸ್ಯರು ಸೇರಿದಂತೆ ನೂರಾರು ಕಿರುತೆರೆ ಕಲಾವಿದರು ಭಾಗವಹಿಸಿದ್ದರು.
ಸ್ಯಾಂಡಲ್ವುಡ್ ನಟ-ನಟಿಯರಿಂದ ಪ್ರತಿಭಟನೆ ಈ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್ ಎಂ ಸುರೇಶ್, ನಾವು ಸರ್ಕಾರದ ವಿರುದ್ಧ ಯಾವುದೇ ಪ್ರತಿಭಟನೆ ಮಾಡುತ್ತಿಲ್ಲ. ಬದಲಿಗೆ ಚಿತ್ರೋದ್ಯಮದಿಂದ ರೈತರ ಹೋರಾಟಕ್ಕೆ ನಾವು ಬೆಂಬಲ ಸೂಚಿಸುತ್ತಿದ್ದೇವೆ ಎಂದು ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಸ್ಪಷ್ಟನೆ ನೀಡಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ನಟ ಶಿವರಾಜ್ ಕುಮಾರ್, ''ಕಾವೇರಿ ಸಮಸ್ಯೆ ಸೂಕ್ಷ್ಮ ವಿಚಾರ. ಹಾಗಾಗಿ ಇದು ನ್ಯಾಯಾಲಯದಲ್ಲಿಯೇ ಬಗೆಹರಿಬೇಕು. ಗಲಾಟೆ ಮಾಡಿದ್ರೆ ಏನು ಆಗಲ್ಲ. ಒಬ್ಬ ತಮಿಳು ನಟನಿಗೆ ನಿನ್ನೆ ಅವಮಾನವಾಗಿದೆ. ಇದನ್ನು ಯಾರು ಏತಕ್ಕಾಗಿ ಮಾಡ್ತಾರೆ ಗೊತ್ತಿಲ್ಲ. ಅದೇನೇ ಇರಲಿ ನಾವು ಈ ಸಮಸ್ಯೆಯಿಂದ ಶಾಶ್ವತವಾಗಿ ಆಚೆ ಬರಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಯೋಚನೆ ಮಾಡಬೇಕಿದೆ. ಒಳ್ಳೆಯ ಮನಸ್ಸಿಂದ ಯೋಚನೆ ಮಾಡಬೇಕು. ಆದರೆ, ಮತ್ತೊಬ್ಬರಿಗೆ ಹರ್ಟ್ ಮಾಡುವುದರಿಂದ ಇಂತಹ ಹೋರಾಟಕ್ಕೆ ಮರ್ಯಾದೆ ಇರಲ್ಲ. ಕನ್ನಡದ ಜನ ತುಂಬಾ ಒಳ್ಳೆಯವರು. ನಾನು ಹೃದಯದಿಂದ ಮಾತಾಡ್ತೀನಿ. ಯಾರು ಬೇಜಾರು ಮಾಡ್ಕೋಬೇಡಿ. ಇವತ್ತು ಇರ್ತೀವಿ, ನಾಳೆ ಇರಲ್ಲ. ಎಲ್ಲರೂ ಒಂದೇ, ಪ್ರೀತಿ ಜಾಸ್ತಿಯಾಗಲಿ'' ಎಂದು ಹರಸುವ ಮೂಲಕ ನಟ ಸಿದ್ಧಾರ್ಥ್ಗೆ ಕ್ಷಮೆ ಕೇಳಿಕೊಂಡರು.
ಗುರುರಾಜ ಕಲ್ಯಾಣ ಮಂಟಪದ ಬಳಿ ಕನ್ನಡ ಚಿತ್ರರಂಗದ ನಟ-ನಟಿಯರಿಂದ ಪ್ರತಿಭಟನೆ ನಟ ಉಪೇಂದ್ರ ಮಾತನಾಡಿ, ನಾನು ಇಂಡಸ್ಟ್ರಿಗೆ ಬಂದ ಬಳಿಕ ಕಾವೇರಿ ಸಮಸ್ಯೆಗಾಗಿ ಹೋರಾಟ ಮಾಡುತ್ತಿರುವುದು ಸುಮಾರು 20-25ನೇ ಬಾರಿ ಇರಬೇಕು. ಇಂತಹ ಸಮಸ್ಯೆ ಬಂದಾಗ ಸೇರುತ್ತೇವೆ, ಮಾತನಾಡುತ್ತೇವೆ. ಪರಿಹಾರ ಸಿಗದ ಸಮಸ್ಯೆ ಇದೆ ಅಂದ್ರೆ ಇದೊಂದೇ ಇರಬಹುದು. ಹಾಗಾಗಿ ನಾವೆಲ್ಲ ವಿಚಾರವಂತರಾಗಬೇಕು. ಸ್ವಲ್ಪ ವಿಚಾರ ಮಾಡಿದರೆ ಸಾಕು ಈ ಸಮಸ್ಯೆ ಹಿಂದಿನ ರಹಸ್ಯೆ ಏನು ಅಂತ ಅರ್ಥವಾಗುತ್ತದೆ. ನೀರು ಬಿಡಿ ಅಂತ ತಮಿಳುನಾಡಿಗರು ಹೋರಾಟ ಮಾಡಬೇಕು. ಆದರೆ, ನೀರು ಬಿಡಬೇಡಿ ಅಂತ ಹೋರಾಟ ಮಾಡುತ್ತಿರುವುದು ಅಚ್ಚರಿ ತರಿಸುತ್ತಿದೆ. ಅದೇನೇ ಇರಲಿ. ಎಲ್ಲರೂ ಬುದ್ಧಿವಂತರಾಗೋಣ. ವೈಚಾರಿಕತೆಯನ್ನು ಬೆಳೆಸಿಕೊಲ್ಲೋಣ. ನಮ್ಮ ಸಮಸ್ಯೆಯನ್ನು ನಾವೇ ಬಗೆಹರಿಸಿಕೊಳ್ಳೋಣ ಎಂದರು.
ನಟ ಅನಿರುದ್ಧ್ ಮಾತನಾಡಿ, ಭೂಮಿ ಮೇಲೆ ಇರುವಂತ ನಾವೆಲ್ಲರೂ ಒಂದೇ ಕುಟುಂಬದವರು. ತಮಿಳಿನವರು ಕೂಡ ನಮ್ಮವರೆ. ದಶಕದಿಂದ ಈ ಸಮಸ್ಯೆ ಹಾಗೇ ಇದೆ. ಇದಕ್ಕೆ ಕಾರಣ ಹಲವು. ಈ ಸಮಸ್ಯೆ ಬಗೆಹರಿಯಬೇಕು ಅಂದ್ರೆ, ಎರಡೂ ರಾಜ್ಯ ಸರ್ಕಾರಗಳು ಕುಳಿತು ಪ್ರೀತಿಯಿಂದ ಹಾಗೂ ಭಾವನಾತ್ಮಕವಾಗಿ ಮಾತನಾಡಿ ಬಗೆಹರಿಸಬೇಕು ಎಂದರು. ನಟರಾದ ಶ್ರೀಮುರಳಿ, ವಿಜಯರಾಘವೇಂದ್ರ, ವಿನೋದ್ ಪ್ರಭಾಕರ್, ವಸಿಷ್ಠ ಸಿಂಹ, ಸುಂದರ್ ರಾಜ್, ನಟಿಯರಾದ ಶೃತಿ, ಉಮಾಶ್ರೀ, ಅನುಪ್ರಭಾಕರ್ ಮಾತನಾಡಿ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯದ ಆಳುವ ಸರ್ಕಾರಗಳು ಕುಳಿತು ಈ ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.
ಇದನ್ನೂ ಓದಿ:Cauvery Dispute: ಕೆಂಪೇಗೌಡ ವಿಮಾನ ನಿಲ್ದಾಣ ಮುತ್ತಿಗೆಗೆ ಯತ್ನ... ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು