ಬೆಂಗಳೂರು:ವಂಚನೆ ಹಾಗೂ ಯುವತಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಸ್ಯಾಂಡಲ್ವುಡ್ ಖಳನಟನನ್ನು ಸುಬ್ರಮಣ್ಯನಗರ ಪೊಲೀಸರು ಮೈಸೂರಿನಲ್ಲಿ ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿಗೆ ವಂಚನೆ ಆರೋಪ: ಸ್ಯಾಂಡಲ್ವುಡ್ ಖಳನಟ ಅರೆಸ್ಟ್ - sandalwood villain sheshagiri basavaraj arrest
ವಂಚನೆ ಹಾಗೂ ಯುವತಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಸ್ಯಾಂಡಲ್ವುಡ್ ಖಳನಟ ಶೇಷಗಿರಿ ಬಸವರಾಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಡಾರ್ಕ್, ಸಸ್ಪೆನ್ಸ್, ಕಿಲಾಡಿ ಸೇರಿದಂತೆ ವಿವಿಧ ಕನ್ನಡ ಚಿತ್ರಗಳಲ್ಲಿ ನಟಿಸಿರುವ ಶೇಷಗಿರಿ ಬಸವರಾಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಶೇಷಗಿರಿ ಇತ್ತೀಚೆಗೆ ಕೆಲಸ ತೊರೆದು ಸಿನಿಮಾಗಳತ್ತ ಒಲವು ತೋರಿದ್ದ. ಬಹುತೇಕ ಚಿತ್ರಗಳಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದ.
ಇತ್ತೀಚೆಗೆ ಯುವತಿಗೆ ಬ್ಯಾಂಕ್ನಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ ಹಣ ಪಡೆದಿದ್ದ. ಹಣ ಪಡೆದು ಹಲವು ದಿನಗಳಾದರೂ ಕೆಲಸ ಕೊಡಿಸದೇ ಹಣವನ್ನೂ ನೀಡದೆ ಸತಾಯಿಸುತ್ತಿದ್ದ.. ಹಣ ನೀಡುವಂತೆ ಪ್ರಶ್ನಿಸಿದಾಗ ಅಸಭ್ಯವಾಗಿ ವರ್ತಿಸಿ ಲೈಂಗಿಕ ದೌರ್ಜನ್ಯ ನಡೆಸಿದ್ದ ಎಂದು ಯುವತಿ ನೀಡಿದ ದೂರಿನ ಮೇರೆಗೆ ಪೊಲೀಸರು ನಟನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.