ಬೆಂಗಳೂರು:ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನಟ ಸಂಚಾರಿ ವಿಜಯ್ ಇಹಲೋಕದ ಪಯಣ ಮುಗಿಸಿದರು. ಕಳೆದ ರಾತ್ರಿ ಅವರ ಬ್ರೈನ್ ಡೆಡ್ ಆಗಿರುವುದನ್ನು ಅಪೊಲೊ ಆಸ್ಪತ್ರೆ ವೈದ್ಯರು ಖಚಿತಪಡಿಸಿದ್ದು, ನಸುಕಿನ ಜಾವ ಅವರು ಮೃತಪಟ್ಟಿರುವುದನ್ನು ತಿಳಿಸಿದರು. ಆ ಬಳಿಕ ರಾತ್ರಿಯೇ ಅವರ ಅಂಗಾಂಗಳನ್ನು ಅವಶ್ಯವಿರುವ ರೋಗಿಗಳಿಗೆ ಕಸಿ ಮಾಡಲಾಗಿದ್ದು, ಈ ಮೂಲಕ ನಟ ಸಾವಿನಲ್ಲೂ ಸಾರ್ಥಕತೆ ಮರೆದರು.
ಸಂಚಾರಿ ವಿಜಯ್ ಅವರ 1 ಲಿವರ್, 2 ಕಿಡ್ನಿ, ಶ್ವಾಸಕೋಶ ಹಾಗೂ ಹೃದಯದ ನಾಲ್ಕು ಕವಾಟುಗಳನ್ನು ಅಪೊಲೊ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಅಂಗಾಂಗ ಕಸಿಗಾಗಿ ಕಾಯುತ್ತಿದ್ದವರಿಗೆ ಕಸಿ ಮಾಡಲಾಗಿದೆ.
ಎರಡು ಬಾರಿ ನಡೆದಿತ್ತು ಆಪ್ನಿಯಾ ಪರೀಕ್ಷೆ
ಮೆದುಳು ವೈಫಲ್ಯವಾದ ರೋಗಿಗೆ ಕೃತಕವಾಗಿ ಅಳವಡಿಸಿರುವ ಉಸಿರಾಟ ವ್ಯವಸ್ಥೆಯನ್ನು ತೆಗೆಯಲಾಗುತ್ತದೆ. ಆಗ ಸ್ವಾಭಾವಿಕವಾಗಿ ಉಸಿರಾಟ ನಡೆಯದಿದ್ದರೆ ಅಪ್ನಿಯಾ ಪಾಸಿಟಿವ್ ಎಂದು ಪರಿಗಣಿಸಿ ಮೆದುಳು ನಿಷ್ಕ್ರೀಯ ಎಂದು ಘೋಷಿಸಲಾಗುತ್ತದೆ. ಈ ರೀತಿ ಸಂಚಾರಿ ವಿಜಯ್ ಅವರಿಗೆ ಎರಡು ಬಾರಿ ಅಪ್ನಿಯಾ ಪರೀಕ್ಷೆ ನಡೆಸಲಾಗಿತ್ತು. ಇದರ ಜತೆಗೆ ಕೆಲವು ಇತರೆ ವೈದ್ಯಕೀಯ ಪರೀಕ್ಷೆಗಳನ್ನೂ ನಡೆಸಿದ್ದು ಅಂತಿಮವಾಗಿ ಮೆದುಳು ನಿಷ್ಕ್ರೀಯ ಎಂದು ವೈದ್ಯರು (ಬ್ರೇನ್ ಡೆತ್) ಘೋಷಿಸಿದರು.