ಕರ್ನಾಟಕ

karnataka

ETV Bharat / state

ಕೇಂದ್ರದ ವಿರುದ್ಧ ಫೆಬ್ರವರಿ 26ರಂದು ದೆಹಲಿ ಚಲೋ: ಭಾರತೀಯ ಸಂಯುಕ್ತ ಕಿಸಾನ್ ಮೋರ್ಚಾ

Samyukta Kisan Morcha call for 'Delhi Chalo': ದೇಶದ ರೈತರ ಪ್ರಮುಖ 7 ಒತ್ತಾಯಗಳ ಬಗ್ಗೆ ದೆಹಲಿ ಚಲೋ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯತರ) ತಿಳಿಸಿದೆ.

Samyukta Kisan Morcha called for Delhi Chalo on 26 February
ಕೇಂದ್ರ ಸರ್ಕಾರದ ವಿರುದ್ಧ ಫೆಬ್ರವರಿ 26ರಂದು ದೆಹಲಿ ಚಲೋ: ಭಾರತೀಯ ಸಂಯುಕ್ತ ಕಿಸಾನ್ ಮೋರ್ಚಾ

By ETV Bharat Karnataka Team

Published : Dec 24, 2023, 9:33 PM IST

ಬೆಂಗಳೂರು:ದೆಹಲಿಯಲ್ಲಿ ಒಂದು ವರ್ಷ ಹೋರಾಟ ಮಾಡಿದ ರೈತರಿಗೆ ನೀಡಿದ್ದ ಭರವಸೆಗಳನ್ನು ಪ್ರಧಾನಿ ಮೋದಿ ಈಡೇರಿಸಿಲ್ಲ. ಆದ್ದರಿಂದ ದೇಶಾದ್ಯಂತ ಮುಂದಿನ ಫೆಬ್ರವರಿ 26ರಂದು ದೆಹಲಿ ಚಲೋ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಭಾರತೀಯ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯತರ) ರಾಷ್ಟ್ರೀಯ ರೈತ ಮುಖಂಡ ಜಗಜೀತ್ ಸಿಂಗ್ ದಲೈವಾಲ ತಿಳಿಸಿದರು.

ಇಲ್ಲಿನ ಗಾಂಧಿ ಭವನದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ರೈತರ ಪ್ರಮುಖ ಏಳು ಬೇಡಿಕೆಗಳ ಬಗ್ಗೆ ದೆಹಲಿ ಚಲೋ ಹೋರಾಟ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಪೂರ್ವಭಾವಿಯಾಗಿ ರಾಜಕೀಯತರವಾಗಿ ರೈತರಿಗೆ ಜಾಗೃತಿ ಮೂಡಿಸಲು ದೇಶಾದ್ಯಂತ ಕಿಸಾನ್ ಮಹಾ ಪಂಚಾಯತ್ ನಡೆಸಲಾಗುತ್ತಿದೆ. ಈಗಾಗಲೇ ವಿವಿಧ ರಾಜ್ಯಗಳಲ್ಲಿ 6 ಕಿಸಾನ್ ಮಹಾಪಂಚಾಯತ್‌ಗಳನ್ನು ನಡೆಸಲಾಗಿದೆ. ಒಡಿಶಾದ ಭುವನೇಶ್ವರ, ಪಂಜಾಬಿನ ಲೂಧಿಯಾನ ಮತ್ತು ಮೊಗಾ, ಕೇರಳದ ಪಾಲಕ್ಕಾಡ್, ತಮಿಳುನಾಡಿನ ಚೆನ್ನೈ, ಕರ್ನಾಟಕದ ಬೆಂಗಳೂರಿನಲ್ಲಿ ಸಭೆ ನಡೆಸಲಾಗಿದೆ. ಮುಂಬರುವ ಒಂದೂವರೆ ತಿಂಗಳಲ್ಲಿ ಬೇರೆ-ಬೇರೆ ರಾಜ್ಯಗಳಲ್ಲಿ ಇನ್ನೂ 14 ಕಿಸಾನ್ ಮಹಾ ಪಂಚಾಯತ್ ಜರುಗಲಿದೆ ಎಂದು ಹೇಳಿದರು.

ಬೇಡಿಕೆಗಳೇನು?:ದೆಹಲಿ ಚಲೋ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಡಾ.ಸ್ವಾಮಿನಾಥನ್ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಬೇಕು. ಎಂಎಸ್​ಪಿ ಅನ್ನು ಖಾತರಿಪಡಿಸಲು ಕಾನೂನನ್ನು ಮಾಡಬೇಕು. ದೇಶದ ಎಲ್ಲ ರೈತರನ್ನು ಸಂಪೂರ್ಣ ಕೃಷಿ ಸಾಲದಿಂದ ಋಣಮುಕ್ತರನ್ನಾಗಿಸಬೇಕು ಎನ್ನುವ ಬೇಡಿಕೆಗಳನ್ನು ಇಡುತ್ತಿದ್ದೇವೆ. 2013ರಲ್ಲಿ ಭೂಸ್ವಾಧೀನ ಕಾನೂನಿನಲ್ಲಿ ರಾಜ್ಯ ಸರ್ಕಾರಗಳು ಮಾಡಿದ ಬದಲಾವಣೆಗಳನ್ನು ತಕ್ಷಣವೇ ಹಿಂಪಡೆಯಬೇಕು. ರೈತರ ಲಿಖಿತ ಅನುಮತಿ ಪಡೆಯಬೇಕು ಮತ್ತು ಯಾವುದೇ ಭೂಸ್ವಾಧೀನಕ್ಕೆ ಮೊದಲು ಬಡ್ಡಿದರದ ಜೊತೆಗೆ 4 ಪಟ್ಟು ಪರಿಹಾರವನ್ನು ಖಚಿತಪಡಿಸಿಕೊಳ್ಳಲು ಹೊಸ ಕಾನೂನನ್ನು ರಚಿಸಬೇಕೆಂಬ ಒತ್ತಾಯವಿದೆ ಎಂದರು.

ಎಲ್ಲ ಕೃಷಿ ಉತ್ಪನ್ನಗಳ ಆಮದು ಸುಂಕವನ್ನು ಹೆಚ್ಚಿಸಿ. ಕೃಷಿ ಉತ್ಪನ್ನಗಳ ಬೆಲೆ ರಕ್ಷಿಸಬೇಕು. ಭಾರತ ಸರ್ಕಾರ ಡಬ್ಲ್ಯುಟಿಒದಿಂದ ಹೊರಬಂದು ಎಲ್ಲ ಮುಕ್ತ ವ್ಯಾಪಾರ ಒಪ್ಪಂದಗಳನ್ನು ರದ್ದುಗೊಳಿಸಬೇಕು. ಮುಕ್ತ ವ್ಯಾಪಾರ ಒಪ್ಪಂದ ಮಾತುಕತೆಯನ್ನು ನಿಲ್ಲಿಸಬೇಕು. ವಿದ್ಯುತ್ ಮಂಡಳಿಗಳ ಖಾಸಗೀಕರಣ ಮಾಡಬಾರದು. ಕೃಷಿ ಪಂಪ್​ಸೆಟ್​ಗಳಿಗೆ ಉಚಿತ ವಿದ್ಯುತ್ ನಿಲ್ಲಿಸುವ ಹುನ್ನಾರ ನಿಲ್ಲಬೇಕು ಎಂದು ಒತ್ತಾಯಿಸಲಾಗುತ್ತದೆ ಎಂದು ವಿವರಿಸಿದರು.

ಕೃಷಿಯಲ್ಲಿ ಎಫ್‌ಡಿಐ ಮತ್ತು ಇ-ಕಾಮರ್ಸ್ ಸೇರಿದಂತೆ ಚಿಲ್ಲರೆ ವ್ಯಾಪಾರದ ಇತರ ಎಲ್ಲ ಸ್ವರೂಪಗಳನ್ನು ನಿಷೇಧಿಸಬೇಕು. ಕೃಷಿ ಮತ್ತು ಚಿಲ್ಲರೆ ವ್ಯಾಪಾರದ ಕಾರ್ಪೊರೇಟೀಕರಣವನ್ನು ತಡೆಗಟ್ಟಲು ನೀತಿ ಮತ್ತು ಕಾನೂನು ಜಾರಿ ಮಾಡಬೇಕು. 60 ವರ್ಷ ತುಂಬಿದ ರೈತರಿಗೆ ಮಾಸಿಕ 5 ಸಾವಿರ ಪಿಂಚಣಿ ನಿಗದಿಪಡಿಸಬೇಕು. ಫಸಲ್ ಭೀಮಾ ಬೆಳವಿಮೆ ಯೋಜನೆ ತಿದ್ದುಪಡಿಯಾಗಬೇಕು ಮತ್ತು ಎಲ್ಲ ಬೆಳೆಗಳಿಗೂ ಬೆಳೆ ವಿಮೆ ಜಾರಿಯಾಗಬೇಕು. ಕರ್ನಾಟಕ ರಾಜ್ಯದಲ್ಲಿ ಬಗರುಹುಕುಂ ಸಾಗುವಳಿ ರೈತರಿಗೆ ಸಾಗುವಳಿ ಪತ್ರ ಕೂಡಲೇ ವಿತರಿಸಬೇಕು. ದೇಶದ ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ಮೌಲ್ಯಗಳನ್ನು ರಕ್ಷಿಸಬೇಕು ಎಂದು ಹಕ್ಕೊತ್ತಾಯಗಳನ್ನು ಮಂಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಕೇಂದ್ರ ಸರ್ಕಾರದಿಂದ ದಮನಕಾರಿ ನೀತಿ:ದೇಶದ ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ಮೌಲ್ಯಗಳನ್ನು ರಕ್ಷಿಸಬೇಕಿದೆ. ರೈತ ಮುಖಂಡರು, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಅವರನ್ನು ರಕ್ಷಿಸುವ ಸಲುವಾಗಿ ಒಲಿಂಪಿಯನ್ ಕುಸ್ತಿಪಟುಗಳೊಂದಿಗೆ ಸಂಸತ್ತಿನ ವಿರೋಧ ಪಕ್ಷದ ಸದಸ್ಯರನ್ನು ಇತ್ತೀಚೆಗೆ ಅಮಾನತುಗೊಳಿಸಿರುವುದು ಪ್ರಜಾಪ್ರಭುತ್ವದ ದಮನಕಾರಿ ನೀತಿ ಎಂದು ಅವರು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ಕುರುಬೂರ್ ಶಾಂತಕುಮಾರ್ (ಕರ್ನಾಟಕ), ಕೆ.ವಿ.ಬಿಜು (ಕೇರಳ), ಅಭಿಮನ್ಯು ಕೋಹರ್ ಮತ್ತು ಲಖ್ವಿಂದರ್ ಸಿಂಗ್ ಔಲಾಖ್ (ಹರಿಯಾಣ), ಸಚಿನ್ ಮೊಹಾಪಾತ್ರ (ಒಡಿಶಾ), ಅರುಣ್ ಸಿನ್ಹಾ (ಬಿಹಾರ), ರವಿದತ್ ಸಿಂಗ್ (ಮಧ್ಯಪ್ರದೇಶ), ಶಂಕರ್ ದಾರೆಕರ್ (ಮಹಾರಾಷ್ಟ್ರ) ಸೇರಿದಂತೆ ರಾಜ್ಯ ರೈತ ಸಂಘದ ವಿ.ಆರ್​.ನಾರಾಯಣ ರೆಡ್ಡಿ, ರಾಜ್ಯ ಕಬ್ಬು ಬೆಳೆಗಾರ ಸಂಘದ ಬಸವರಾಜ್ ಪಾಟೀಲ್, ಎನ್.ಹೆಚ್.ದೇವಕುಮಾರ್, ಹತ್ತಳ್ಳಿ ದೇವರಾಜ್, ಬರಡನ್ಪುರ ನಾಗರಾಜ್, ಪರಶುರಾಮ್, ರಾಜೇಶ್, ಧರ್ಮರಾಜ್ ಸಾಹು ಇದ್ದರು.

ಇದನ್ನೂ ಓದಿ:'ಹಿಂದಿ ಮಾತನಾಡುವವರಿಗೆ ತಮಿಳುನಾಡಿನಲ್ಲಿ ರಸ್ತೆ, ಶೌಚಾಲಯ ಸ್ವಚ್ಛತೆಯ ಕೆಲಸ': ಡಿಎಂಕೆ ಸಂಸದ ಮಾರನ್‌ ಹೇಳಿಕೆ ವಿವಾದ

ABOUT THE AUTHOR

...view details