ಬೆಂಗಳೂರು: ಬಂಧನ ಭೀತಿಯಿಂದ ಮಾಜಿ ಮೇಯರ್ ಸಂಪತ್ ರಾಜ್ ರಾತ್ರೋರಾತ್ರಿ ಆಸ್ಪತ್ರೆಯಿಂದ ಪರಾರಿಯಾಗಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳಿಂದ ಅರೆಸ್ಟ್ ಆಗುವ ಭೀತಿಯಿಂದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂಪತ್ ರಾಜ್ ಬುಧವಾರವೇ ಡಿಸ್ಚಾರ್ಜ್ ಆಗಿದ್ದು, ಬಳಿಕ ಪರಾರಿಯಾಗಿದ್ದಾರೆ.
ನಿನ್ನೆ ರಾತ್ರಿ ಸಿಸಿಬಿ ತಂಡ ಆಸ್ಪತ್ರೆಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದಾಗ ಈ ವಿಚಾರ ತಿಳಿದು ಬಂದಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ವೇಳೆ ಸಿಸಿಬಿ ಅಧಿಕಾರಿಗಳ ಗಮನಕ್ಕೆ ತರುವಂತೆ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ನೋಟಿಸ್ ನೀಡಲಾಗಿತ್ತು. ಆದರೂ ಆದೇಶ ಮೀರಿ ನಡೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಕಾಕ್ಸ್ಟೌನ್ನಲ್ಲಿರುವ ಸಂಪತ್ ರಾಜ್ ಮನೆ ಕೂಡ ಬೀಗ ಹಾಕಿದ್ದು, ಅವರಿಗಾಗಿ ಸಿಸಿಬಿ ತಂಡ ಹುಡುಕಾಟ ನಡೆಸಿದೆ. ಅವರು ಕೇರಳದ ಕಡೆ ತೆರಳಿರುವ ಶಂಕೆ ಇದ್ದು, ಒಂದು ತಂಡ ಅಲ್ಲಿಗೂ ತೆರಳಿದೆ. ಹಾಗೆಯೇ ಸೂಚನೆ ಮೀರಿ ಸಂಪತ್ ರಾಜ್‌ರನ್ನು ಡಿಸ್ಚಾರ್ಜ್ ಮಾಡಿದ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಸಿಸಿಬಿ ನೋಟಿಸ್ ನೀಡಿದೆ.