ಬೆಂಗಳೂರು:ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಇಟ್ಟ ಪ್ರಕರಣದಲ್ಲಿ ಮಾಜಿ ಮೇಯರ್ ಸಂಪತ್ ರಾಜ್ ಕಸ್ಟಡಿ ಅವಧಿ ಅಂತ್ಯವಾಗಲಿದೆ. ಹೀಗಾಗಿ ಇಂದು ಬೆಳಗ್ಗೆ 11 ಗಂಟೆಗೆ 67ನೇ ಸಿಸಿಹೆಚ್ ನ್ಯಾಯಾಲಯದ ಮುಂದೆ ಅವರನ್ನು ಸಿಸಿಬಿ ಅಧಿಕಾರಿಗಳು ಹಾಜರುಪಡಿಸಲಿದ್ದಾರೆ.
ಮತ್ತೆ ಸಿಸಿಬಿ 5 ದಿನಗಳ ಕಾಲ ಸಂಪತ್ ರಾಜ್ ಅವರನ್ನು ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ. ಈ ಮೊದಲು ಕೇವಲ ಎರಡು ದಿನ ಮಾತ್ರ ಸಿಸಿಬಿ ಕಸ್ಟಡಿಗೆ ನೀಡಿದ್ದು, ಅದರಲ್ಲಿ ಒಂದು ದಿನ ಸಂಪತ್ ರಾಜ್ಗೆ ಅನಾರೋಗ್ಯದ ಕಾರಣ ವಿಚಾರಣೆ ಮುಂದೂಡಲಾಗಿತ್ತು. ಹೀಗಾಗಿ ನಿನ್ನೆ ಬೆಳಗ್ಗೆ ಆಡುಗೋಡಿಯ ಸಿಎಆರ್ ಸೆಲ್ನಲ್ಲಿ ಸಂಪತ್ ರಾಜ್ ಅನ್ನು ಸಿಸಿಬಿ ಎಸಿಪಿ ವೇಣುಗೋಪಾಲ್ ವಿಚಾರಣೆಗೆ ಒಳಪಡಿಸಿದ್ದರು.
ಬಳಿಕ ಮಧ್ಯಾಹ್ನದ ನಂತರ ಸಂಪತ್ ರಾಜ್ ಅನ್ನು ಸಿಸಿಬಿ ಕಚೇರಿಗೆ ಕರೆತಂದು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಎರಡು ಬಾರಿ ವಿಚಾರಣೆ ನಡೆಸಿದ್ದರು. ಈ ವೇಳೆ ಸಂಪತ್ ರಾಜ್ ಗಲಭೆಯ ಸಂಬಂಧ ಮಾಹಿತಿಯನ್ನು ಬಾಯ್ಬಿಟ್ಟಿರಲಿಲ್ಲ. ನಾನು ಒಬ್ಬ ಜನಪ್ರತಿನಿಧಿಯಾಗಿ ಗಲಭೆ ಬಗ್ಗೆ ಮಾಹಿತಿ ಪಡೆಯುತ್ತಿದ್ದೆ ಅಷ್ಟೇ ಅಂತ ಉತ್ತರ ನೀಡಿದ್ದಾರೆ ಎನ್ನಲಾಗ್ತಿದೆ. ಬೆಂಕಿ ಹಚ್ಚೋದಾಗಿದ್ರೆ ಹಿಂದೂ ಹುಡುಗರ ಕೈಯಲ್ಲಿ ಹಚ್ಚಿಸ್ತಿದ್ದೆ. ಮುಸ್ಲಿಂರನ್ನು ಯಾಕೆ ಬಳಸಿಕೊಳ್ಳಬೇಕಿತ್ತು..? ನಾವೆಲ್ಲ ಓಡಾಡಿ ಅಖಂಡ ಶ್ರೀನಿವಾಸಮೂರ್ತಿಯನ್ನು ಗೆಲ್ಲಿಸಿದ್ದು. ಜೊತೆಗೆ ನಾನು ಮೇಯರ್ ಆಗಿದ್ದವನು, ನನಗೂ ಕಾನೂನಿನ ಅರಿವಿದೆ. ನಾನು ಎಲ್ಲೂ ತಲೆಮರೆಸಿಕೊಂಡು ಓಡಿ ಹೋಗಿರಲಿಲ್ಲ. ನಾನು ಎಂಎಲ್ಎ ಮನೆಗೆ ಬೆಂಕಿ ಹಚ್ಚಿಸಿಲ್ಲ ಎಂಬುದಾಗಿ ವಿಚಾರಣೆ ವೇಳೆ ತಿಳಿಸಿರುವ ಕುರಿತು ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಸದ್ಯ ಸಿಸಿಬಿ ಬಳಿ ಇರುವ ಟೆಕ್ನಿಕಲ್ ಸಾಕ್ಷ್ಯಗಳಿಗೆ ಸರಿಯಾಗಿ ಉತ್ತರ ನೀಡದ ಕಾರಣ ಇಂದು ನ್ಯಾಯಾಲಯಕ್ಕೆ ರಿಮ್ಯಾಂಡ್ ಅಪ್ಲಿಕೇಶನ್ ನೀಡಿ ಮತ್ತೆ ಸಂಪತ್ ರಾಜ್ ಅವರನ್ನು 5 ದಿನ ಕಸ್ಟಡಿಗೆ ಒಪ್ಪಿಸುವಂತೆ ಕೇಳುವ ಸಾಧ್ಯತೆ ಇದೆ ಎನ್ನಲಾಗ್ತಿದೆ.