ಬೆಂಗಳೂರು: ನಗರದಲ್ಲಿನ ರಾಜಕಾಲುವೆ ಒತ್ತುವರಿ ತೆರವುಗೊಳಿಸುವ ವಿಷಯದಲ್ಲಿ ಮೆಸರ್ಸ್ ಬಾಗ್ಮನೆ ಡೆವಲಪಮೆಂಟ್ ಪ್ರೈವೆಟ್ ಲಿಮಿಟೆಡ್ ಸಲ್ಲಿಸಿದ್ದ ದೂರಿನ ಅನ್ವಯ ಲೋಕಾಯುಕ್ತ ಪ್ರಾರಂಭಿಸಿರುವ ಪ್ರಕ್ರಿಯೆಗಳ ಕಾನೂನು ಬದ್ಧತೆ ಪ್ರಶ್ನಿಸಿ ಸಮಾಜ ಪರಿವರ್ತನಾ ಸಮುದಾಯ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಸಿದೆ.
ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಎಸ್ಆರ್ ಹಿರೇಮಠ ಅರ್ಜಿ ಸಲ್ಲಿಸಿದ್ದಾರೆ. ಕರ್ನಾಟಕ ಲೋಕಾಯುಕ್ತ, ಬಿಬಿಎಂಪಿ, ಪೌರಾಡಳಿತ ಇಲಾಖೆ, ಬಾಗ್ಮನೆ ಡೆವಲಪ್ಮೆಂಟ್ ಪ್ರೈವೇಟ್ ಲಿಮಿಟೆಡ್ನ್ನು ಪ್ರತಿವಾದಿಗಳನ್ನಾಗಿಸಲಾಗಿದ್ದು, ಇನ್ನಷ್ಟೇ ವಿಚಾರಣೆಗೆ ಬರಬೇಕಾಗಿದೆ.
ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳಲ್ಲಿ ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ವಸತಿ ಸಮುಚ್ಚಯಗಳು ಸೇರಿದಂತೆ ವಿವಿಧ ಕಟ್ಟಡಗಳು ರಾಜಕಾಲುವೆ ಒತ್ತುವರಿ ಮಾಡಿರುವ ಪರಿಣಾಮ ಮಳೆ ನೀರು ಸರಾಗವಾಗಿ ಹರಿಯಲಾರದೇ ಕೆಲ ಭಾಗಗಳಲ್ಲಿ ಮನೆಗಳಿಗೆ ನೀರು ನುಗ್ಗುವುದಕ್ಕೆ ಕಾರಣವಾಗಿತ್ತು. ಈ ಗೊಂದಲಗಳಿಗೆ ಪರಿಹಾರ ಕಲ್ಪಿಸುವ ಸಲುವಾಗಿ ಬಿಬಿಎಂಪಿ ತಕ್ಷಣ ಕ್ರಮಕ್ಕೆ ಮುಂದಾಗಿದ್ದು ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗೆ ಮುಂದಾಗಿತ್ತು.