ಬೆಂಗಳೂರು : ಕೋವಿಡ್ ಸೋಂಕಿನಿಂದ ಗುರುವಾರ ನಿಧನರಾದ ಬಸವಕಲ್ಯಾಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ. ನಾರಾಯಣ ರಾವ್ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಇಂದು ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಂತಾಪ ಸೂಚನಾ ಸಭೆಯಲ್ಲಿ ಮಾಜಿ ಸಂಸದರಾದ ಕೆ.ಎಚ್. ಮುನಿಯಪ್ಪ, ಬಿ.ಎನ್. ಚಂದ್ರಪ್ಪ, ಶಾಸಕ ಧರ್ಮಸೇನ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ. ಪುಷ್ಪಾ ಅಮರ್ನಾಥ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಮತ್ತಿತರರು ಉಪಸ್ಥಿತರಿದ್ದರು.
ಕೆಪಿಸಿಸಿ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಮಾತನಾಡಿ, ಇದೊಂದು ದುಃಖದ ದಿನ, ಅವರ ಆತ್ಮಕ್ಕೆ ಶಾಂತಿ ಕೋರುತ್ತೇವೆ. ಹುಟ್ಟು ಹೋರಾಟಗಾರ, ಅಪರೂಪದ ರಾಜಕಾರಣಿ, ಸಮಾಜದ ಎಲ್ಲ ವರ್ಗಗಳ ಬಗ್ಗೆ ಸದಾ ಚಿಂತನೆ ಮಾಡುತ್ತಿದ್ದರು. ಸಾಮಾಜಿಕ ಕಳಕಳಿ ಹೊಂದಿದ್ದರು. ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದರು. ಆಸ್ಪತ್ರೆಗೆ ದಾಖಲಾಗುವ ಮೂರು ದಿನ ಮುನ್ನ ಪಕ್ಷದ ಕಚೇರಿಗೆ ಆಗಮಿಸಿ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಪ್ರವಾಸ ಮಾಡೋಣ ಬನ್ನಿ, ನಾನೂ ಪಾಲ್ಗೊಳ್ಳುತ್ತೇನೆ ಎಂದಿದ್ದರು. ಕಾಂಗ್ರೆಸ್ ಪಕ್ಷದ ಬಗ್ಗೆ ಎಐಸಿಸಿ ಸಭೆಯಲ್ಲಿ ಉತ್ತಮ ಭಾಷಣ ಮಾಡಿದ್ದರು. ಆಗ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ವೇದಿಕೆ ಮೇಲೆ ಕರೆದು ಮಾತನಾಡಿಸಿದ್ದರು. ವಿಶೇಷವಾಗಿ ಯುವಕರಿಗೆ ಹೆಚ್ಚು ಸ್ಪೂರ್ತಿ ಕೊಡುವ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ನಿರಂತರ ಹೋರಾಡಿದವರು ಎಂದು ಬಣ್ಣಿಸಿದರು.
ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ಮಾತನಾಡಿ, ನಾರಾಯಣ ರಾವ್ ಸುರ್ದೀಘ ಕಾಲದ ಸ್ನೇಹಿತರಾಗಿದ್ದರು. ಸಮಾಜದಲ್ಲಿ ಹಿಂದುಳಿದ ವರ್ಗಗಳ ಪರವಾಗಿ ನೇರವಾಗಿ ಹೋರಾಡಿದ ಕೀರ್ತಿ ಅವರದ್ದು. ವಿಶ್ರಾಂತಿಯನ್ನೇ ಪಡೆಯದ ಹೋರಾಟಗಾರ, ಪಕ್ಷ ನಿಷ್ಠರಾಗಿದ್ದರು. ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರು. ನಿಷ್ಠಾವಂತ ಮುಖಂಡನನ್ನು ನಾವು ಕಳೆದುಕೊಂಡಿದ್ದೇವೆ ಎಂದರು.