ಬೆಂಗಳೂರು : ಉತ್ತಮ ಗುಣಮಟ್ಟವಲ್ಲದ ಔಷಧಗಳನ್ನು ವಿತರಣೆ ಮಾಡಿದ ಆರೋಪ ಸಂಬಂಧ ಬಿಹಾರ ಮೂಲದ ಔಷಧಿ ತಯಾರಿಕಾ ಸಂಸ್ಥೆಯಾದ ಮೆ. ಹಿಂದುಸ್ತಾನ್ ಮೆಡಿಕಲ್ ಪ್ರಾಡೆಕ್ಟ್ಸ್ ಕಂಪನಿ ಮತ್ತದರ ಪಾಲುದಾರರ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದು ಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ತಮ್ಮ ವಿರುದ್ಧ ಔಷಧ ಮತ್ತು ಸೌಂದರ್ಯವರ್ಧಕ ಕಾಯಿದೆಯಡಿ ದಾಖಲಾಗಿ ಪ್ರಕರಣ ರದ್ದು ಪವನ್ ಕುಮಾರ್ ಲೋಹರುಕ ಎಂಬುವರು ಮತ್ತವರ ಪಾಲುದಾರಿಕೆಯ ಕಂಪನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ ನಟರಾಜನ್ ಅವರ ಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿದೆ. ಅಲ್ಲದೆ, ಔಷಧ ಮತ್ತು ಸೌಂದರ್ಯ ವರ್ಧಕ ಕಾಯ್ದೆಯ ಸೆಕ್ಷನ್ 34ರಡಿ ಕಂಪನಿ ಎಂದರೆ ಸಂಸ್ಥೆ ಮತ್ತದರ ನಿರ್ದೇಶಕ/ಪಾಲುದಾರರು ಸೇರಿರುತ್ತಾರೆ. ಸಾಮಾನ್ಯವಾಗಿ ಪಾಲುದಾರ ಕಾಯ್ದೆಯಡಿ ವೈಯಕ್ತಿಕವಾಗಿ ಪಾಲುದಾರರು ಎಂದು ಕರೆಯುತ್ತಾರೆ. ಆದರೆ, ಒಟ್ಟಾರೆ ಬಂದಾಗ ಸಂಸ್ಥೆ ಎಂದು ಕರೆಯುತ್ತಾರೆ. ಹಾಗಾಗಿ, ಸಂಸ್ಥೆ-ಕಂಪನಿಯ ದೈನಂದಿನ ವ್ಯವಹಾರಕ್ಕೆ ಪಾಲುದಾರರು ಜವಾಬ್ದಾರರಲ್ಲ ಎಂಬುದಾಗಿ ಹೇಳಲಾಗದು ಎಂದು ತಿಳಿಸಿದೆ.
ಪ್ರಕರಣದ ಹಿನ್ನೆಲೆ ಏನು?:ರಾಜ್ಯ ಔಷಧ ನಿರೀಕ್ಷಕರು 2009ರ ಅ. 12ರಂದು ನೆಲಮಂಗಲದ ಔಷಧಿ ಮಳಿಗೆಯೊಂದಕ್ಕೆ ಭೇಟಿ ನೀಡಿ ಅಲ್ಲಿನ ಔಷಧಿಗಳನ್ನು ತಪಾಸಣೆ ನಡೆಸಿದ್ದರು. ಆದರೆ, ಔಷಧವೊಂದನ್ನು ತಪಾಸಣೆಗೆ ಸರ್ಕಾರದ ಔಷಧ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಪರೀಕ್ಷೆ ನಡೆಸಿ ನೀಡಲಾದ ವರದಿಯಲ್ಲಿ ಔಷಧವು ಕಳಪೆ ಗುಣಮಟ್ಟದ್ದಾಗಿದೆ ಎಂದು ತಿಳಿಸಲಾಗಿತ್ತು.
ಇದರಿಂದ ಕರ್ನಾಟಕ ಔಷಧ ನಿಯಂತ್ರಕರಿಂದ ಪ್ರಕರಣದ ತನಿಖೆ ನಡೆಸಲು ಅನುಮತಿ ಪಡೆದಿದ್ದ ನಿರೀಕ್ಷಕರು, ಆ ಔಷಧಿ ಉತ್ಪಾದಿಸುತ್ತಿದ್ದ ಬಿಹಾರದ ಪಟ್ನಾದ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ನಂತರ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದರು. ಆ ಪ್ರಕರಣವು ರದ್ದತಿಗೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು.