ಬೆಂಗಳೂರು :ರಾಜ್ಯ ರಾಜಧಾನಿ ಬೆಂಗಳೂರಿನ ಎಲ್ಲ ಇಂದಿರಾ ಕ್ಯಾಂಟೀನ್‌ನಲ್ಲಿ ಗುಣಮಟ್ಟದ ಆಹಾರದೊಂದಿಗೆ ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ. ಇದರಿಂದ ಉದ್ಯಮ ಮತ್ತಷ್ಟು ವಿಸ್ತರಿಸಿಕೊಳ್ಳಲಿದೆ ಎಂದು ನಗರದಲ್ಲಿ ಇಂದು ಕೆಎಂಎಫ್ ನೂತನ ಅಧ್ಯಕ್ಷ ಭೀಮಾನಾಯ್ಕ್ ತಿಳಿಸಿದರು.
ಇಂದಿರಾ ಕ್ಯಾಂಟೀನ್‌ಗಳಲ್ಲಿ ನಂದಿನಿ ಉತ್ಪನ್ನಗಳ ಲಭ್ಯತೆ ಕುರಿತು ಶೀಘ್ರದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಚಾಕೋಲೇಟ್, ಬಿಸ್ಕತ್, ಐಸ್ ಕ್ರೀಂ, ಹಾಲು ಹಾಗು ಮೊಸರು ಸೇರಿದಂತೆ ಹಲವು ನಂದಿನ ಉತ್ಪನಗಳು ಕೂಡ ಕ್ಯಾಂಟೀನ್‌ನಲ್ಲಿ ಲಭ್ಯವಾಗಲಿದೆ. ಈ ಮೂಲಕ ಕೆಎಂಎಫ್ ಮಾರುಕಟ್ಟೆಯನ್ನು ವಿಸ್ತರಣೆ ಮಾಡುವುದಕ್ಕೆ ಮುಂದಾಗಲಾಗುತ್ತಿದೆ. ಬಹುಮುಖ್ಯವಾಗಿ ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್ಗೆ ಜನರನ್ನು ಆಕರ್ಷಿಸಲು ಹೊಸ ಯೋಜನೆ ರೂಪಿಸಲಾಗುತ್ತಿದೆ ಎಂದು ಭೀಮಾನಾಯ್ಕ್ ಮಾಹಿತಿ ನೀಡಿದರು.
ಇದನ್ನೂ ಓದಿ :Indira Canteen: ಬೆಂಗಳೂರು ನಗರದಲ್ಲಿ 250 ಇಂದಿರಾ ಕ್ಯಾಂಟೀನ್ ಪ್ರಾರಂಭ - ಸಿಎಂ ಸಿದ್ದರಾಮಯ್ಯ
ಇತ್ತೀಚಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮದವರೊಂದಿಗೆ ನಗರದ ಪ್ರತಿ ವಾರ್ಡ್‌ಗೆ ಒಂದರಂತೆ ಕನಿಷ್ಠ 250 ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದರು. ಇಂದಿರಾ ಕ್ಯಾಂಟೀನ್‌ಗಳ ಪುನಾರಂಭಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲಾಗಿದ್ದು, ಇಲ್ಲಿವರೆಗೂ ಇಂದಿರಾ ಕ್ಯಾಂಟೀನ್ಗೆ ಬಿಬಿಎಂಪಿ ವತಿಯಿಂದ ಶೇ 70, ಹಾಗೂ ಸರ್ಕಾರದಿಂದ ಶೇ.30 ರಷ್ಟು ವೆಚ್ಚ ಭರಿಸಲಾಗುತ್ತಿತ್ತು. ಆದರೆ ಈಗ ಬಿಬಿಎಂಪಿಯು ಶೇ. 50 ರಷ್ಟು ಹಾಗೂ ಸರ್ಕಾರ ಶೇ. 50 ರಷ್ಟು ವೆಚ್ಚ ಭರಿಸಲು ತೀರ್ಮಾನಿಸಲಾಗಿದೆ ಎಂದಿದ್ದರು.