ಬೆಂಗಳೂರು: ದಿನವಿಡೀ ಕೋರ್ಟ್ಗಳ ಸುತ್ತಾಟ, ಸಿಬ್ಬಂದಿ, ಸೌಲಭ್ಯಗಳ ಕೊರತೆ ನಡುವೆಯೂ ಸರ್ಕಾರದ ಪ್ರಕರಣಗಳಲ್ಲಿ ಸಮರ್ಥವಾಗಿ ವಕಾಲತ್ತು ವಹಿಸಬೇಕಾದ ಅನಿವಾರ್ಯತೆ. ಜೊತೆಗೆ ವರ್ಷಪೂರ್ತಿ ದುಡಿದರೂ ಸಿಗದ ಸೂಕ್ತ ವೇತನ. ಇದು ಅಭಿಯೋಜನೆ ಇಲಾಖೆಯಲ್ಲಿ ಕೆಲಸ ಮಾಡುವ ಎಪಿಪಿಗಳು ಹಾಗೂ ಪಿಪಿಗಳು ಕಳೆದ 20 ವರ್ಷಗಳಿಂದ ಎದುರಿಸುತ್ತಿರುವ ಸಂಕಷ್ಟ.
ನ್ಯಾಯದಾನ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯನ್ನು ರಾಜ್ಯ ಸರ್ಕಾರ ನಿರ್ಲಕ್ಷಿಸುತ್ತಲೇ ಬಂದಿದೆ. ಹೀಗಾಗಿಯೇ ಕಳೆದ 20 ವರ್ಷಗಳಿಂದ ಸಹಾಯಕ ಸರ್ಕಾರಿ ಅಭಿಯೋಜಕ (ಎಪಿಪಿ) ಹಾಗೂ ಸರ್ಕಾರಿ ಅಭಿಯೋಜಕ (ಪಿಪಿ) ಹುದ್ದೆಗಳನ್ನು ಸರ್ಕಾರ ಉನ್ನತೀಕರಣಗೊಳಿಸಿಲ್ಲ. ಜತೆಗೆ ಸೂಕ್ತ ವೇತನವನ್ನೂ ನೀಡುತ್ತಿಲ್ಲ. ಹೀಗಾಗಿ ಅಭಿಯೋಜಕರ ಜತೆಗೆ ಕಾನೂನು ಸುವ್ಯವಸ್ಥೆ ಗಟ್ಟಿಗೊಳಿಸಬೇಕಿದ್ದ ಅಭಿಯೋಜನೆ ಕೂಡ ದುರ್ಬಲಗೊಳ್ಳುತ್ತಿದೆ.
ದೇಶದಲ್ಲೇ ಮೊದಲಿಗೆ ಅಭಿಯೋಜನೆ ಇಲಾಖೆಯನ್ನು ವ್ಯವಸ್ಥಿತವಾಗಿ ಸ್ಥಾಪಿಸಿದ ಹೆಗ್ಗಳಿಕೆ ರಾಜ್ಯಕ್ಕಿದೆ. ಆದರೆ ಇಲಾಖೆಗೆ ಅದರ ಭಾಗವಾಗಿ ಕೆಲಸ ಮಾಡುವ ಅಭಿಯೋಜಕರಿಗೆ ನೀಡಬೇಕಾದ ಸವಲತ್ತುಗಳನ್ನು ಇಂದಿಗೂ ಸರಿಯಾಗಿ ನೀಡಿಲ್ಲ. ಪ್ರಾಸಿಕ್ಯೂಷನ್ ಇಲಾಖೆಯನ್ನು ಆರಂಭದಲ್ಲಿ ಕಾನೂನು ಇಲಾಖೆ ಅಡಿಯಲ್ಲಿ ಪ್ರಾರಂಭಿಸಲಾಗಿತ್ತು. ನಂತರ ಗೃಹ ಇಲಾಖೆ ವ್ಯಾಪ್ತಿಗೆ ತರಲಾಯಿತು.
ಇಲಾಖೆ ಆರಂಭದಲ್ಲಿ ಎಪಿಪಿಗಳ ಹುದ್ದೆಗಳನ್ನು ಕ್ಲಾಸ್-2 ಅಡಿ ಪರಿಗಣಿಸಲಾಗಿತ್ತು. ಇದೇ ಕ್ಲಾಸ್-2 ವ್ಯಾಪ್ತಿಯಲ್ಲಿ ತಹಶೀಲ್ದಾರ್, ಡಿವೈಎಸ್ಪಿ, ಕಮರ್ಷಿಯಲ್ ಟ್ಯಾಕ್ಸ್ ಆಫೀಸರ್ (ಸಿಟಿಒ) ವೈದ್ಯಾಧಿಕಾರಿ, ಎಸಿಎಫ್ ಹುದ್ದೆಗಳೂ ಇದ್ದವು. ಕಾಲಾಂತರದಲ್ಲಿ ಈ 5 ಹುದ್ದೆಗಳಲ್ಲಿ ಎಪಿಪಿ ಹೊರತುಪಡಿಸಿ 4ನ್ನು ಕ್ಲಾಸ್-1ಗೆ ಉನ್ನತೀಕರಿಸಲಾಯಿತು. ಅದರಂತೆ ಈ ಅಧಿಕಾರಿಗಳ ವೇತನ-ಸವಲತ್ತುಗಳು ಕೂಡ ಏರಿಕೆಯಾದವು. ಆದರೆ ಎಪಿಪಿಗಳ ಹುದ್ದೆಗಳು ಉನ್ನತೀಕರಣಗೊಳ್ಳಲಿಲ್ಲ. ಸಂಬಳ-ಸವಲತ್ತುಗಳೂ ಏರಿಕೆಯಾಗಲಿಲ್ಲ.