ಬೆಂಗಳೂರು: ನಗರದ 34 ವರ್ಷದ ಮಹಿಳೆಯೊಬ್ಬರ ಗರ್ಭಕೋಶದಲ್ಲಿದ್ದ ಬರೋಬ್ಬರಿ 222 ಗಡ್ಡೆಗಳನ್ನು ಸಕ್ರ ವರ್ಲ್ಡ್ ಆಸ್ಪತ್ರೆ ವೈದ್ಯರು ಹೊರತೆಗೆದಿದ್ದಾರೆ.
ಟಿವಿ ಆ್ಯಂಕರ್ ಹಾಗೂ ಪತ್ರಕರ್ತೆಯಾಗಿರುವ ರಿತಿಕಾ ಆಚಾರ್ಯ ಎಂಬುವವರ ಗರ್ಭಾಶಯದಲ್ಲಿದ್ದ 2.5 ಕೆಜಿ ಗಾತ್ರದ ಗಡ್ಡೆಯನ್ನು ಸಕ್ರ ವರ್ಲ್ಡ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥರೂ ಆಗಿರುವ ವೈದ್ಯೆ ಶಾಂತಲಾ ತುಪ್ಪಣ್ಣ ನೇತೃತ್ವದ ತಂಡ ಯಶಸ್ವಿಯಾಗಿ ಹೊರತೆಗೆದಿದೆ.
34 ವರ್ಷದ ಮಹಿಳೆಯೊಬ್ಬರ ಗರ್ಭಕೋಶದಲ್ಲಿದ್ದ 222 ಗಡ್ಡೆಗಳನ್ನು ಹೊರತೆಗೆದ ವೈದ್ಯರು ಈ ಹಿಂದೆ 2016ರಲ್ಲಿ ಈಜಿಪ್ಟ್ನ ಮಹಿಳೆಯೊಬ್ಬರ ಗರ್ಭಾಶಯದಿಂದ 186 ಗಡ್ಡೆಗಳನ್ನು ತೆಗೆದಿದ್ದು ದಾಖಲೆಯಾಗಿತ್ತು. ಇದೀಗ ಬೆಂಗಳೂರಿನ ಮಹಿಳೆಯೊಬ್ಬರ ಗರ್ಭಾಶಯದಿಂದ 222 ಗಡ್ಡೆಗಳನ್ನು(222 fibroides) ತೆಗೆದಿರುವುದು ಈ ದಾಖಲೆಯನ್ನು ಮುರಿದಿದೆ.
ಗರ್ಭಕೋಶ ಚಿಕಿತ್ಸೆಗೆ ಒಳಪಟ್ಟಿದ್ದ ರಿತಿಕಾ ಆಚಾರ್ಯ ಮಾತನಾಡಿ, ಹೊಟ್ಟೆಯ ಗಾತ್ರ 7-8 ತಿಂಗಳ ಗರ್ಭಿಣಿಯಂತಿತ್ತು. ನನ್ನ ಸುತ್ತಮುತ್ತಲು ಓಡಾಡುತ್ತಿದ್ದ ಜನರು ನಾನು ಗರ್ಭಿಣಿ ಎಂದೇ ತಿಳಿಯುತ್ತಿದ್ದರು. ಇದು ನನ್ನ ಮೇಲೆ ಸಾಕಷ್ಟು ಪರಿಣಾಮ ಬೀರಲು ಆರಂಭಿಸಿತ್ತು. ಕೊರೊನಾ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಆಸ್ಪತ್ರೆಗೆ ಹೋಗಲು ಭಯವಾಗುತ್ತಿತ್ತು. ವ್ಯಾಯಾಮ ಮಾಡಲು ಹೋದರೆ ಬೆನ್ನು ಬಗ್ಗಿಸಲು ಸಾಧ್ಯವಾಗುತ್ತಿರಲಿಲ್ಲ. ವೈದ್ಯರ ಬಳಿ ಹೋಗಲು 2 ವರ್ಷಗಳ ಕಾಲ ಬೇಕಾಯಿತು. ಫೈಬ್ರಾಯ್ಡ್‌ಗಳಿಂದ ಎದುರಾಗಿದ್ದ ಮಾನಸಿಕ ಒತ್ತಡದಿಂದ ಇನ್ನೂ ಚೇತರಿಸಿಕೊಳ್ಳುತ್ತಿದ್ದೇನೆ. ಇದನ್ನು ಹೊರತುಪಡಿಸಿದರೆ, ಇನ್ನಾವುದೇ ಸಮಸ್ಯೆಗಳಿಲ್ಲ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಹೇಗೆ ಮುರಿದಿದ್ದೇನೆಂಬುದು ಗೊತ್ತಿಲ್ಲ. ಹೆಮ್ಮೆ ಪಡುವ ವಿಷಯ ಇದಲ್ಲ ಎಂದು ಹೇಳಿದ್ದಾರೆ.
ಗರ್ಭಕೋಶದಲ್ಲಿದ್ದ 222 ಫೈಬ್ರಾಯ್ಡ್ ನಂತರ ಡಾ.ಶಾಂತಲಾ ತುಪ್ಪಣ್ಣ ಮಾತನಾಡಿ, ಗಡ್ಡೆಗಳ ಸಂಪೂರ್ಣವಾಗಿ ತೆಗೆಯಲು ಶಸ್ತ್ರಚಿಕಿತ್ಸೆಗೆ 5 ಗಂಟೆಗಳ ಕಾಲ ಬೇಕಾಯಿತು. ಈ ಗಡ್ಡೆಗಳು ಸುಮಾರು 2.5 ಕೆಜಿ ಇದ್ದವು. ಮಹಿಳೆಯರಲ್ಲಿ ಇದು ಸಾಮಾನ್ಯವಾದ ಸಮಸ್ಯೆಯಾಗಿದೆ. ಇದಕ್ಕೆ ಶಸ್ತ್ರಚಿಕಿತ್ಸೆಯ ಅಗತ್ಯವಿರುವುದಿಲ್ಲ. ಆದರೆ, ರಿತಿಕಾ ಅವರ ಗರ್ಭಾಶಯದಲ್ಲಿ ಹೂಕೋಸು ಗಾತ್ರದಲ್ಲಿ ಗಡ್ಡೆಗಳಿರುವುದು ಕಂಡು ಬಂದಿತ್ತು. ಹೀಗಾಗಿ ಅದನ್ನು ತೆಗೆಯಲೇಬೇಕಿತ್ತು. ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರಲ್ಲಿ ಗರ್ಭಾಶಯದ ಫೈಬ್ರಾಯ್ಡ್‌ಗಳು (fibroides) ಸಾಮಾನ್ಯವಾಗಿರುತ್ತದೆ. ಇದಕ್ಕೆ ಯಾವುದೇ ಪ್ರಮುಖ ಕಾರಣಗಳಿಲ್ಲದಿದ್ದರೂ, ಹಾರ್ಮೋನ್ ಮಟ್ಟ, ಫ್ಯಾಮಿಲಿ ಹಿಸ್ಟರಿ ಪರಿಣಾಮ ಬೀರಬಹುದು ಎಂದು ತಿಳಿಸಿದ್ದಾರೆ.
ಗಡ್ಡೆಗಳ ಬೆಳವಣಿಗೆ ತೀವ್ರಗೊಂಡಾಗ ರಕ್ತಹೀನತೆ, ಹೆಪ್ಪುಗಟ್ಟುವಿಕೆ, ಆಯಾಸ, ಅಂಗಗಳ ಮೇಲೆ ಒತ್ತಡ ಮತ್ತು ಹೊಟ್ಟೆ ಉಬ್ಬುವ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಬಿಟ್ ಕಾಯಿನ್ ಪ್ರಕರಣ ಕುರಿತು ಹೈಕಮಾಂಡ್ ವಿವರಣೆ ಕೇಳಿಲ್ಲ: ಸಿಎಂ