ಬೆಂಗಳೂರು: ಪಂಚಿಂಗ್ ಡೈಲಾಗ್ಗಳಿಂದಲೇ ಕನ್ನಡ ಚಿತ್ರರಂಗದಲ್ಲಿ ತನ್ನದೇ ಸ್ಟಾರ್ ಡಮ್ ಕ್ರಿಯೇಟ್ ಮಾಡಿದ ನಟ ಡೈಲಾಗ್ ಕಿಂಗ್ ಸಾಯಿಕುಮಾರ್. ಸದ್ಯ ಬಹಳ ದಿನಗಳ ಬಳಿಕ, ಸಾಯಿಕುಮಾರ್ ರಾಕ್ಷಸರು ಎಂಬ ಸಿನಿಮಾಕ್ಕಾಗಿ ಮತ್ತೆ ಖಾಕಿ ತೊಟ್ಟು ಪೊಲೀಸ್ ಅಧಿಕಾರಿಯಾಗಿ ಅಬ್ಬರಿಸೋಕ್ಕೆ ರೆಡಿಯಾಗಿದ್ದಾರೆ.
ಇದೊಂದು ಸಖತ್ ಕ್ರೈಮ್ ಥ್ರಿಲ್ಲರ್ ಚಿತ್ರ. ಐದು ಜನ ಕ್ರಿಮಿನಲ್ಗಳು ಮಾಡಬಾರದ ದುಷ್ಕೃತ್ಯಗಳನ್ನು ಮಾಡಿ ತಲೆ ಮರಸಿಕೊಂಡಿರುತ್ತಾರೆ. ಇವರನ್ನು ಪೊಲೀಸರು ಹೇಗೆ ಹುಡುಕುತ್ತಾರೆ ಎಂಬುದೇ ಕಥಾ ಹಂದರ. ದಂಡುಪಾಳ್ಯದ ಕ್ರಿಮಿನಲ್ಗಳನ್ನು ಮೀರಿಸುವ ಕ್ರಿಮಿನಲ್ಗಳ ಕಥೆಯನ್ನ, ನಿರ್ದೇಶಕ ರಜತ್ ತೆರೆ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ. ಇದು ರಜತ್ ಅವರ ಚೊಚ್ಚಲ ಚಿತ್ರ.
ಈ ಚಿತ್ರದಲ್ಲಿ ಸಾಯಿಕುಮಾರ್ ಅಲ್ಲದೇ, ರಾಜಶೇಖರ್, ನಾಜರ್, ಸುಮನ್, ಕಿರಣ್ ಸುನೀಲ್, ತ್ರಿವೇಣಿ, ಅವಿನಾಶ್ ನೀರಜ್ ಯಾದವ್, ಹರ್ಷಿತ್, ಚೈತ್ರ, ಮಾನಸ, ಆಶಾ, ಮಂಜುಳ, ಸುರೇಖ, ರಚನ, ಕಮಲ, ಚಂದ್ರಕಲಾ ರಾಧ ಹೀಗೆ ಸಾಕಷ್ಟು ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಇನ್ನು ರಾಕ್ಷಸರು ಸಿನಿಮಾವನ್ನ ನೋಡಿದ ಸೆನ್ಸಾರ್ ಮಂಡಳಿ, ಕ್ರೈಂ ಹೆಚ್ಚಾಗಿರುವುದರಿಂದ ಬಿಡುಗಡೆಗೆ ಒಪ್ಪಿಗೆ ನೀಡಲು ನಿರಾಕರಿಸಿತ್ತು. ಆ ನಂತರ ನಿರ್ಮಾಪಕರ ಮನವಿ ಮೇರೆಗೆ ಕೆಲವು ಸೀನ್ ಕಟ್ಗಳ ಜೊತೆಗೆ A ಸರ್ಟಿಫಿಕೇಟ್ ನೀಡಿ ಬಿಡುಗಡೆಗೆ ಸೆನ್ಸಾರ್ ಮಂಡಳಿ ಒಪ್ಪಿಗೆ ನೀಡಿದೆ. ಎರಡು ಹಾಡುಗಳಿರುವ ಈ ಚಿತ್ರಕ್ಕೆ ಎಮಿಲ್ ಸಂಗೀತ ನೀಡಿದ್ದಾರೆ. ರಾಜಶೇಖರ್ ಸಂಭಾಷಣೆ ಬರೆದಿದ್ದಾರೆ. ಆಗಸ್ಟ್ ಎರಡನೇ ವಾರದೊಂದು ಈ ಚಿತ್ರವನ್ನ ಭಾರತದಾದ್ಯಂತ ಬಿಡುಗಡೆ ಮಾಡಲು ರೆಡಿಯಾಗಿದ್ದಾರೆ.
ಇದನ್ನೂ ಓದಿ:ಸ್ಯಾಟಿನ್ ಸೀರೆಯಲ್ಲಿ ಮೌನಿ ರಾಯ್ ಸಿಂಪಲ್ ನೋಟ; ಅಂದ ಹೆಚ್ಚಿಸಿಕೊಂಡ ಬಾಲಿವುಡ್ ಗೊಂಬೆ