ಬೆಂಗಳೂರು:ನೆಲೋಗಿ ಪೊಲೀಸ್ ಠಾಣಾ ವ್ಯಾಪ್ತಿಯ ಅಕ್ರಮ ಮರಳು ಸಾಗಾಣಿಕೆ ತಡೆಯಲು ಹೋದ ಪೊಲೀಸ್ ಕಾನ್ಸ್ಟೇಬಲ್ ಹತ್ಯೆ ತನಿಖೆಯಲ್ಲಿ ನಡೆದಿರುವ ಸಾಯಿಬಣ್ಣ ಶೂಟೌಟ್ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವುದಾಗಿ ಸರ್ಕಾರ ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಬಿಜೆಪಿ ಸದಸ್ಯರು ವಿಧಾನ ಪರಿಷತ್ನಲ್ಲಿ ನಡೆಸುತ್ತಿದ್ದ ಧರಣಿಯನ್ನು ವಾಪಸ್ ಪಡೆದರು.
ವಿಧಾನಪರಿಷತ್ ಬೆಳಗಿನ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು. ನ್ಯಾಯಾಂಗ ತನಿಖೆಗೆ ಗೃಹ ಸಚಿವ ಪರಮೇಶ್ವರ್ ನಿರಾಕರಿಸಿದ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಸದನದ ಬಾವಿಗಿಳಿದು ಧರಣಿ ನಡೆಸಿದ ಬಿಜೆಪಿ ಶಾಸಕರು ಇಂದು ಬೆಳಗ್ಗೆ ಕೂಡ ಸದನದಲ್ಲಿ ಧರಣಿ ಮುಂದುವರೆಸಿದರು. ನ್ಯಾಯಾಂಗ ತನಿಖೆಗೆ ಆದೇಶಿಸುವವರೆಗೂ ಧರಣಿ ಮುಂದುವರೆಸುವುದಾಗಿ ಹೇಳಿದರು. ಪ್ರತಿಪಕ್ಷ ಬಿಜೆಪಿ ಹೋರಾಟಕ್ಕೆ ಮಣಿದ ಗೃಹ ಸಚಿವ ಪರಮೇಶ್ವರ್, ಈ ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಸಿಐಡಿ ತನಿಖೆಗೊಳಪಡಿಸುತ್ತೇನೆ ಎಂದರು. ಗೃಹ ಸಚಿವರು ಸಿಐಡಿಗೆ ಪ್ರಕರಣ ವಹಿಸಿದ ಹಿನ್ನೆಲೆಯಲ್ಲಿ ಸದನದ ಬಾವಿಯಿಂದ ಹೊರಬಂದ ಬಿಜೆಪಿ ಸದಸ್ಯರು ಪ್ರತಿಭಟನೆ ಕೈಬಿಟ್ಟು ಕಲಾಪದಲ್ಲಿ ಭಾಗಿಯಾದರು.
ಪ್ರಕರಣದ ಹಿನ್ನೆಲೆ:ಸೋಮವಾರ ಸಂಜೆ ವಿಧಾನ ಪರಿಷತ್ ಕಲಾಪದಲ್ಲಿ ನಿಯಮ 330 ರ ಅಡಿ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ರೈತನೊಬ್ಬ ಮರಳು ಸಾಗಾಣಿಕೆ ಮಾಡುವ ವೇಳೆ ತಡೆಯಲು ಬಂದ ಕಾನ್ಸ್ಟೇಬಲ್ ಮೃತಪಟ್ಟ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸುವಂತೆ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರು, ಶಶಿಲ್ ನಮೋಶಿ, ರವಿಕುಮಾರ್, ತಳವಾರ್ ಸಾಬಣ್ಣ ಪ್ರಸ್ತಾಪಿಸಿದ್ದರು. ಇದಕ್ಕೆ ಉತ್ತರ ನೀಡಿದ್ದ ಗೃಹ ಸಚಿವ ಪರಮೇಶ್ವರ್, ಪೊಲೀಸರು ತಡೆದಾಗ ಟ್ರ್ಯಾಕ್ಟರ್ ಅನ್ನು ನಿಲ್ಲಿಸಿದ್ದರೆ ದಂಡ ಹಾಕಿ ಬಿಡುತ್ತಿದ್ದರು. ಆದರೆ ಇಲ್ಲಿ ನಮ್ಮ ಪೊಲೀಸ್ ಕಾನ್ಸ್ಟೇಬಲ್ ಮೃತರಾಗಿದ್ದಾರೆ.