ಬೆಂಗಳೂರು:ಗುರು ಪೂರ್ಣಿಮೆ ಅಂಗವಾಗಿ ಜೆಪಿ ನಗರದ ಸತ್ಯಸಾಯಿ ಗಣಪತಿ ದೇವಸ್ಥಾನದಲ್ಲಿ ಸಾಯಿ ನಿಜರೂಪದ ಮೇಣದ ಪ್ರತಿಮೆ ಸ್ಥಾಪನೆ ಮಾಡಲಾಗುತ್ತಿದೆ. ಈ ಮೂಲಕ ಭಕ್ತರಿಗೆ ಹೊಸ ಅನುಭವವನ್ನು ನೀಡಲು ಟ್ರಸ್ಟ್ ಮುಂದಾಗಿದೆ.
ಜೆಪಿ ನಗರದ ಶ್ರೀ ಸತ್ಯ ಗಣಪತಿ ಸಾಯಿ ಟ್ರಸ್ಟ್, ಈ ಬಾರಿಯ ಗುರು ಪೂರ್ಣಿಮೆಗೆ ನಗರದ ಜನರಿಗೆ ಅಭೂತಪೂರ್ವ ಅನುಭವ ನೀಡಲು ಸಜ್ಜಾಗಿದೆ. ಶಿರಡಿ ಸಾಯಿ ಬಾಬಾ ಅವರ ಸನ್ನಿಧಾನ ಹೊರತುಪಡಿಸಿದರೆ, ಬೆಂಗಳೂರು ನಗರದಲ್ಲೇ ಅತ್ಯಂತ ವಿಭಿನ್ನ ಹಾಗೂ ವಿಶೇಷವಾದ ಅಲಂಕಾರವನ್ನು ಈ ದೇವಸ್ಥಾನದಲ್ಲಿ ಮಾಡುವ ಜೊತೆಯಲ್ಲಿ ಶ್ರೀ ಶಿರಡಿ ಸಾಯಿ ಬಾಬಾ ಅವರ ನಿಜರೂಪದ ದರ್ಶನ ನೀಡುವ ಮೇಣದ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗುತ್ತಿದೆ.
ಈ ಬಗ್ಗೆ ವಿವರಿಸಿದ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ನ ವ್ಯವಸ್ಥಾಪಕ ಟ್ರಸ್ಟಿ ರಾಮ್ ಮೊಹನ ರಾಜ್, ಪ್ರತಿ ಬಾರಿಯೂ ಗುರು ಪೂರ್ಣಿಮೆಯ ಸಂದರ್ಭದಲ್ಲಿ ಭಕ್ತರಿಗೆ ಹೊಸ ಅನುಭವವನ್ನು ನೀಡುವುದು ನಮ್ಮ ಉದ್ದೇಶ. ಅಲ್ಲದೆ ಈ ಬಾರಿ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ನಗರದ ಭಕ್ತರಿಗೆ ಶಿರಡಿ ಸಾಯಿ ಬಾಬಾ ಅವರ ನಿಜರೂಪದ ದರ್ಶನ ನೀಡಲು, ಜೀವ ಕಳೆಯನ್ನು ಹೊಂದಿರುವ ಮೇಣದ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ತೀರ್ಮಾನಿಸಿದ್ದೇವೆ ಎಂದರು.