ಬೆಂಗಳೂರು: ರಾಜ್ಯಾದ್ಯಂತ ಇರುವ ಪಟಾಕಿ ಗೋದಾಮುಗಳ ಸರ್ವೆ ನಡೆಸಿ, ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಸದಾಶಿವನಗರದ ನಿವಾಸದ ಬಳಿ ಮಾತನಾಡಿದ ಅವರು, ಇನ್ನು ಮುಂದೆ ಯಾವುದೇ ಅವಘಡ ಆಗದಂತೆ ಎಚ್ಚರವಹಿಸಲಾಗುವುದು. ರಾಜ್ಯದಲ್ಲಿ ಇರುವ ಪಟಾಕಿ ಗೋದಾಮುಗಳಿಗೆ ಸುರಕ್ಷತೆ ಹಾಗೂ ಪರಿಶೀಲನೆ ನಡೆಸುವಂತೆ ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿಗಳಿಗೆ ನೋಟಿಸ್ ನೀಡಿ ಸೂಚನೆ ಕೊಟ್ಟಿರುವುದಾಗಿ ಹೇಳಿದ್ರು.
ತಮಿಳುನಾಡಿನ ಕಾರ್ಮಿಕರು ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಯುವಕರ ಸಾವು ದುಃಖಕರ ಸಂಗತಿ. ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದು, ತಮಿಳುನಾಡಿನವರು 3 ಲಕ್ಷ ಮೊತ್ತದ ಚೆಕ್ ಈಗಾಗಲೇ ವಿತರಣೆ ಮಾಡಿದ್ದಾರೆ. ಅವಘಡಕ್ಕೆ ಏನು ಕಾರಣ ಎಂದು ಶೀಘ್ರವೇ ತನಿಖೆ ನಡೆಸಲಾಗುವುದು ಎಂದರು.
ಒಳಗೆ ಹೋಗಲು ಆಗದ ಕಾರಣ ಕಟ್ಟಡದ ಹಿಂದಿನ ಗೋಡೆ ಒಡೆದು ಹಾಕುವಂತೆ ಸೂಚನೆ ನೀಡಿದ್ದೆ. ಇನ್ನು ಮುಂದೆ ಅಮಾಯಕರ ಸಾವು ಸಂಭವಿಸದಂತೆ ಮುನ್ನೆಚರಿಕೆ ವಹಿಸುತ್ತೇವೆ. ಸಾವಿನ ಸಂಖ್ಯೆ 14ಕ್ಕೆ ಏರಿಕೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಘಟನೆ ನೋವಿನ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.
ಬೊಮ್ಮಾಯಿ ಅವರ ಹೇಳಿಕೆಯಂತೆ ನಡೆಯುತ್ತಿದ್ದೇವೆ :ಕ್ಷೇತ್ರಗಳಿಗೆ ಅನುದಾನದ ವಿಚಾರದಲ್ಲಿ ಕಾಂಗ್ರೆಸ್ ತಾರತಮ್ಯ ಮಾಡುತ್ತಿದ್ದು, ಬಿಜೆಪಿ ಈ ರೀತಿ ಮಾಡಿರಲಿಲ್ಲ ಎನ್ನುವ ಬೊಮ್ಮಾಯಿ ಅವರ ಆರೋಪಕ್ಕೆ "ಬೊಮ್ಮಾಯಿ ಅವರು ವಿಧಾನ ಪರಿಷತ್ತಿನಲ್ಲಿ ಏನು ಹೇಳಿಕೆ, ಉತ್ತರ ನೀಡಿದ್ದರೋ, ಅದನ್ನೇ ನಾವು ಪಾಲನೆ ಮಾಡುತ್ತಿದ್ದೇವೆ ಎಂದು ತಿರುಗೇಟು ನೀಡಿದರು.