ಬೆಂಗಳೂರು : ಕೆಂಗೇರಿಯಿಂದ ಚಲ್ಲಘಟ್ಟ ಮೆಟ್ರೋ ನಿಲ್ದಾಣಗಳ ನಡುವೆ ಹೊಸ ಮಾರ್ಗ ಸುರಕ್ಷತಾ ಪರಿಶೀಲನೆಯನ್ನು ಗುರುವಾರ ರೈಲ್ವೆ ಸುರಕ್ಷತಾ ಆಯುಕ್ತರು ನಡೆಸುವುದರಿಂದ ಪರ್ಪಲ್ ಲೈನ್ ಮೆಟ್ರೋ ಕಾರ್ಯಾಚರಣೆ ವ್ಯತ್ಯಯವಾಗಲಿದೆ ಎಂದು ನಮ್ಮ ಮೆಟ್ರೋ ಪ್ರಕಟಣೆಯಲ್ಲಿ ತಿಳಿಸಿದೆ.
ಶುಕ್ರವಾರ ಕೆಂಗೇರಿ ಮತ್ತು ಮೈಸೂರು ರಸ್ತೆ ನಿಲ್ದಾಣಗಳ ನಡುವೆ ಇಡೀ ದಿನ ರೈಲು ಸಂಚಾರ ಸ್ಥಗಿತಗೊಳಿಸಲಾಗುತ್ತಿದೆ. ಆದರೆ ಗ್ರೀನ್ ಲೈನ್ನ ಬೈಯಪ್ಪನಹಳ್ಳಿ- ಮೈಸೂರು ರಸ್ತೆ ನಿಲ್ದಾಣಗಳ ನಡುವೆ ಹಾಗೂ ವೈಟ್ ಫೀಲ್ಡ್ - ಕೃಷ್ಣರಾಜಪುರ ನಿಲ್ದಾಣಗಳ ನಡುವೆ ರೈಲು ಸೇವೆ ಲಭ್ಯವಿರಲಿದೆ ಎಂದು ಹೇಳಿದೆ.
ಕಳೆದ ವಾರ ಸೆಪ್ಟೆಂಬರ್ 21 ರಂದು ನಮ್ಮ ಮೆಟ್ರೋದ ನೇರಳೆ ಮಾರ್ಗದ ಕಾರಿಡಾರ್‌ನಲ್ಲಿ ಅಪೂರ್ಣವಾಗಿರುವ ಕೆ.ಆರ್ ಪುರ- ಬೈಯಪ್ಪನಹಳ್ಳಿ 2 ಕಿ.ಮೀ ಮಾರ್ಗದ ಸುರಕ್ಷತಾ ತಪಾಸಣೆಯನ್ನು ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು ನಡೆಸಿದ್ದರು. ದಕ್ಷಿಣ ವೃತ್ತದ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರ ತಂಡ (ಸಿಎಂಆರ್‌ಎಸ್) ನೂತನ ವಿಸ್ತರಿತ ಮಾರ್ಗದಲ್ಲಿ ವಿವಿಧ ಬಗೆಯ ತಪಾಸಣೆ ಕೈಗೊಂಡಿದ್ದರು. ತಂಡದಲ್ಲಿದ್ದ ಸುಮಾರು 20 ಅಧಿಕಾರಿಗಳು, ತಂತ್ರಜ್ಞರು ನಾಲ್ಕು ಗುಂಪಲ್ಲಿ ವಿವಿಧ ಹಂತಗಳ ಪರೀಕ್ಷೆ ನಡೆಸಿದ್ದರು. ಬೆಂಗಳೂರು ಮೆಟ್ರೋ ರೈಲ್ವೆ ಅಧಿಕಾರಿಗಳಿಂದ ದಾಖಲೆ, ವಿವರವನ್ನು ಪಡೆದಿದ್ದರು.
ಈ ಮಾರ್ಗದ ಪಿಲ್ಲರ್‌ಗಳ ಗುಣಮಟ್ಟ, ಟ್ರ್ಯಾಕ್ ಅಳವಡಿಕೆ ಹಾಗೂ ಸಿಗ್ನಲಿಂಗ್ ವ್ಯವಸ್ಥೆ ಪರಿಶೀಲನೆ ನಡೆಸಿದ್ದರು. ಮೋಟಾರ್ ಟ್ರಾಲಿ ಮೂಲಕ 2 ಕಿ.ಮೀ ಸಂಚರಿಸಿದ್ದರು. ಪ್ರಮುಖವಾಗಿ ಬೆನ್ನಿಗಾನಹಳ್ಳಿ ಬಳಿಯ ಓಪನ್ ವೆಬ್ ಗರ್ಡರ್ ಸಾಮರ್ಥ್ಯದ ಮಾಹಿತಿಯನ್ನು ತೆಗೆದುಕೊಂಡಿದ್ದರು. ಬೆನ್ನಿಗಾನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಒದಗಿಸಿದ ವ್ಯವಸ್ಥೆ, ಕೈಗೊಂಡ ಸುರಕ್ಷತಾ ಕ್ರಮಗಳ ಬಗ್ಗೆ ಸಿಎಂಆರ್‌ಎಸ್ ತಂಡ ಪರಿಶೀಲನೆ ನಡೆಸಿತ್ತು.
ಸದ್ಯ ವರದಿಯನ್ನು ಬಿಎಂಆರ್‌ಸಿಎಲ್‌ಗೆ ನೀಡಿದ್ದು, ನಿಬಂಧನೆ, ಮಾರ್ಗಸೂಚಿ ಅನ್ವಯ ಕಾರ್ಯಾಚರಣೆ ನಡೆಸುವಂತೆ ಸೂಚಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುಮತಿ ಬಾಕಿ ಇದ್ದು, ವಾಣಿಜ್ಯ ಸಂಚಾರ ಆರಂಭಿಸುವ ದಿನಾಂಕವನ್ನು ನಿಗದಿಪಡಿಸುವುದು ಬಾಕಿ ಇದೆ. ಈ ತಿಂಗಳ ಅಂತ್ಯಕ್ಕೆ ಜನಸಂಚಾರ ಆರಂಭವಾಗಬಹುದು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ತಿಂಗಳು ಕೂಡ ನೇರಳೆ ಮಾರ್ಗದ ಕೆಂಗೇರಿ ಮತ್ತು ಚಲ್ಲಘಟ್ಟ ಹಾಗೂ ಬೈಯಪ್ಪನಹಳ್ಳಿ ಮತ್ತು ಕೃಷ್ಣರಾಜಪುರ ಮೆಟ್ರೋ ನಿಲ್ದಾಣಗಳ ನಡುವಿನ ಸಿಗ್ನಲಿಂಗ್ ವ್ಯವಸ್ಥೆಗಳ ಪರೀಕ್ಷೆ ನಡೆಸುವ ಸಲುವಾಗಿ ಆಗಸ್ಟ್ 17 ರಂದು (ಗುರುವಾರ) ಕೆಂಗೇರಿ ಮತ್ತು ಮೈಸೂರು ರಸ್ತೆಯ ಮೆಟ್ರೋ ನಿಲ್ದಾಣಗಳ ನಡುವೆ ಯಾವುದೇ ರೈಲು ಸೇವೆ ಲಭ್ಯವಿರುವುದಿಲ್ಲ. ಮೈಸೂರು ರಸ್ತೆ ಮತ್ತು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣಗಳ ನಡುವೆ ಮಾತ್ರ ಬೆಳಗ್ಗೆ 5 ರಿಂದ ರಾತ್ರಿ 11 ರ ವರೆಗೆ ರೈಲು ಸೇವೆಗಳು ಇರಲಿದೆ ಎಂದು ಬಿಎಂಆರ್‌ಸಿಎಲ್ ಸಂಸ್ಥೆ ತನ್ನ ಪ್ರಕಟಣೆಯಲ್ಲಿ ಮಾಹಿತಿ ನೀಡಿತ್ತು.
ಇದನ್ನೂ ಓದಿ :ಬೈಯಪ್ಪನಹಳ್ಳಿ- ಕೃಷ್ಣರಾಜಪುರ ನಿಲ್ದಾಣಗಳ ನಡುವೆ ಸಿಗ್ನಲಿಂಗ್ ಪರೀಕ್ಷೆ: ಮೆಟ್ರೋ ರೈಲು ಕಾರ್ಯಾಚರಣೆ ಸಮಯದಲ್ಲಿ ಬದಲಾವಣೆ