ಬೆಂಗಳೂರು :ಬೆಂಗಳೂರು ಸೇಫ್ ಸಿಟಿ ನಿರ್ಭಯಾ ಪ್ರಾಜೆಕ್ಟ್ನಲ್ಲಿ ಅವ್ಯಹಾರ ನಡೆದಿದೆ ಎಂಬ ಸುದ್ದಿ ಸದ್ಯ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದು, ಈ ಕುರಿತಂತೆ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳ ನಡುವೆ ಕೋಲ್ಡ್ ವಾರ್ ಮುಂದುವರೆದಿದೆ.
ಸೇಫ್ ಸಿಟಿ ನಿರ್ಭಯಾ ಪ್ರಾಜೆಕ್ಟ್ ವಿಚಾರವಾಗಿ ನಿನ್ನೆ ಸುದ್ದಿಗೋಷ್ಠಿ ನಡೆಸಿ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಸ್ಪಷ್ಟನೆ ನೀಡಿದ್ದರು. ಇದಾದ ಬಳಿಕ ಮತ್ತೆ ಟಾಂಗ್ ಕೊಟ್ಟಿರುವ ಐಪಿಎಸ್ ಅಧಿಕಾರಿ ಡಿ ರೂಪಾ ಅವರು, ಏಪ್ರಿಲ್ನಲ್ಲಿ ಇದೇ ಪ್ರಾಜೆಕ್ಟ್ ಸಂಬಂಧ ದೂರು ದಾಖಲಾಗಿತ್ತು.
ಆಗಿನ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ಗೂ ಈ ಪ್ರಾಜೆಕ್ಟ್ ಬಗ್ಗೆ ದೂರು ದಾಖಲಾಗಿತ್ತು. ಆದರೆ, ಆಗಲೂ ಯಾವುದೇ ಕ್ರಮ ಜರುಗಿಸಿಲ್ಲ. ಮಾರ್ಚ್ನಲ್ಲೂ ಗೃಹ ಇಲಾಖೆಗೆ ದೂರು ದಾಖಲಿಸಲಾಗಿತ್ತು ಎಂದು ರೂಪಾ ತಿಳಿಸಿದ್ದಾರೆ.
ಏನಿದು ಟೆಂಡರ್ ಪ್ರಕರಣ :ಸುಮಾರು 610 ಕೋಟಿ ರೂ. ಯೋಜನೆಯ ಮೊದಲ ಬಿಡ್ ವೇಳೆ ಆಸಕ್ತಿ ತೋರದ ಕಂಪನಿಗಳು ಎರಡನೇ ಬಿಡ್‌ನಲ್ಲಿ ಟೆಂಡರ್ ಪಡೆಯಲು ಮುಗಿ ಬಿದ್ದಿದ್ದರಂತೆ. ಚೀನಾದ ಕೆಲ ಕಂಪನಿಗಳೊಂದಿಗೆ ಟೈ ಅಪ್ ಮಾಡ್ಕೊಂಡಿದ್ದ 3 ಕಂಪನಿಗಳು ಫೈನಲ್ ಆಗಿದ್ದವು. ಈ ವೇಳೆ ಟೆಂಡರ್ ದಕ್ಕಿಸಿಕೊಳ್ಳಲು ಕೆಲ ಐಪಿಎಸ್ ಅಧಿಕಾರಿಗಳ ಹೆಸರನ್ನು ದುರ್ಬಳಕೆ ಮಾಡಲಾಗುತ್ತಿದೆ.
ಅದರಲ್ಲಿ ಹಿರಿಯ ಮಹಿಳಾ ಐಪಿಎಸ್ ಅಧಿಕಾರಿಯಾದ ಡಿ.ರೂಪಾ ಅವರ ಹೆಸರನ್ನು ದುರ್ಬಳಕೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಗೃಹ ಇಲಾಖೆಯ ಕಾರ್ಯದರ್ಶಿ ಹೆಸರು ಹೇಳಿಕೊಂಡು ಮಹಿಳೆಯೊಬ್ಬರು ಕಾಲ್ ಮಾಡಿ ಟೆಂಡರ್ ಮಾಹಿತಿ ಕೇಳಿದ್ದಾರೆ ಎಂದು ಹೇಳಲಾಗಿದೆ.
ಓದಿ: ನಿರ್ಭಯಾ ಸೇಫ್ ಸಿಟಿ ಟೆಂಡರ್ ವಿವಾದ: ನಿಂಬಾಳ್ಕರ್ ಪಾತ್ರದ ತನಿಖೆ ನಡೆಸಲು ಡಿ. ರೂಪಾ ಆಗ್ರಹ
ಟೆಂಡರ್ ದಾಖಲಾತಿಗಳನ್ನು ಸಿದ್ಧಪಡಿಸಲು ಹೊಣೆಗಾರಿಕೆ ಹೊತ್ತುಕೊಂಡಿರುವ ಅರ್ನೆಸ್ಟ್ ಯಂಗ್ ಸಮಾಲೋಚಕ ಕಂಪನಿಯ ಪಾಲುದಾರ ಅಕ್ಷಯ್ ಎಂಬುವರಿಗೆ ಕರ್ನಾಟಕ ಗೃಹ ಕಾರ್ಯದರ್ಶಿ ಹೆಸರಿನಲ್ಲಿ ಕರೆ ಮಾಡಿದವರೊಬ್ಬರು ಟೆಂಡರ್ ಪ್ರಕ್ರಿಯೆಯ ದಾಖಲೆಗಳನ್ನು ತಮಗೆ ಕಳಿಸಬೇಕು ಎಂದು ಸೂಚಿಸಿದ್ದಾರೆ.
ಈ ಕುರಿತು ಪಾಲುದಾರ ಅಕ್ಷಯ್ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಕರೆ ಮಾಡಿ ಇ-ಮೇಲ್ ಮೂಲಕ ದೂರು ನೀಡಿದ್ದಾರೆ. ಯೋಜನೆಗೆ ಸಂಬಂಧಿಸಿದ ಮಾಹಿತಿ ಕೇಳಿರುವ ಬಗ್ಗೆ ತನಿಖೆ ಮಾಡಿ ಎಂದು ಅಪರ ಪೊಲೀಸ್ ಆಯುಕ್ತ (ಆಡಳಿತ) ಹೇಮಂತ್ ನಿಂಬಾಳ್ಕರ್ ಮುಖ್ಯ ಕಾರ್ಯದರ್ಶಿಗೆ ಕೋರಿದ್ದರು.
ಇದಕ್ಕೂ ಮೊದಲು ಬೆಂಗಳೂರು ಸುರಕ್ಷಿತ ನಗರ ಕಾರ್ಯಕ್ರಮದ ಅಡಿ ಸಿಸಿ ಟಿವಿ ಅಳವಡಿಸಲು ಗುತ್ತಿಗೆ ಕರೆಯಲಾಗಿತ್ತು. ಮೊದಲಿಗೆ ನಾಲ್ಕು ಗುತ್ತಿಗೆದಾರರು ಭಾಗವಹಿಸಿದ್ದರು. ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್, ಲಾರ್ಸೆನ್ ಆಂಡ್ ಟರ್ಬೋ, ಮ್ಯಾಟ್ರಿಕ್ಸ್ ಸೆಕ್ಯುರಿಟಿ ಮತ್ತು ಸರ್ವೇಲೆನ್ಸ್ ಲಿಮಿಟೆಡ್, ಎನ್‌ಸಿಸಿ ಲಿಮಿಟೆಡ್ ಭಾಗವಹಿಸಿದ್ದವು.
ಆಗ ಟೆಂಡರ್ ಪ್ರಕ್ರಿಯೆ ಲೋಪದ ಬಗ್ಗೆ ಬಿಇಎಲ್ ಪ್ರಧಾನಿಯವರಿಗೆ ನೀಡಿದ ದೂರಿನಲ್ಲಿ ಮ್ಯಾಟ್ರಿಕ್ಸ್ ಸೆಕ್ಯುರಿಟಿ ಮತ್ತು ಸರ್ವೇಲೆನ್ಸ್ ಲಿಮಿಟೆಡ್ ಮತ್ತು ಎನ್‌ಸಿಸಿ ಲಿಮಿಟೆಡ್ ಕಂಪನಿಯಲ್ಲಿ ಓರ್ವ ನಿರ್ದೇಶಕ ಒಬ್ಬರೇ ವ್ಯಕ್ತಿಯಾಗಿದ್ದಾರೆ.
ಈ ಎರಡೂ ಕಂಪನಿಗಳು ಒಳ ಒಪ್ಪಂದ ಮಾಡಿಕೊಂಡಿರುವುದು ಕಾಣುತ್ತಿದೆ. ಈಗಾಗಲೇ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಗೆ ಈ ಕುರಿತು ಮಾಹಿತಿ ನೀಡಿ ಈ ಎರಡೂ ಕಂಪನಿಗಳನ್ನು ಟೆಂಡರ್ ಪ್ರಕ್ರಿಯೆಯಿಂದ ಹೊರ ಗಿಡಬೇಕೆಂದು ಕೇಳಿಕೊಂಡಿತ್ತು. ಆಧಾರವಿಟ್ಟುಕೊಂಡು ಪ್ರಧಾನಿ ಕಾರ್ಯಾಲಯವು ಮುಖ್ಯ ಕಾರ್ಯದರ್ಶಿ ಅವರಿಂದ ವರದಿ ಕೇಳಿತ್ತು. ಈ ಹಿನ್ನೆಲೆ ಗುತ್ತಿಗೆ ಪ್ರಕ್ರಿಯೆಯನ್ನು ವಜಾಗೊಳಿಸಲಾಗಿತ್ತು.