ಅತ್ಯಾಧುನಿಕ ಪೊಲೀಸ್ ಕಮಾಂಡ್ ಸೆಂಟರ್ ಲೋಕಾರ್ಪಣೆಗೊಳಿಸಿದ ಸಿಎಂ ಬೆಂಗಳೂರು: ಸೇಫ್ ಸಿಟಿ ಯೋಜನೆಯಡಿ ನಗರದಲ್ಲಿ ತಲೆ ಎತ್ತಿರುವ ಅತ್ಯಾಧುನಿಕ ಕಮಾಂಡ್ ಸೆಂಟರ್ನ ನೂತನ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋರ್ಕಾಪಣೆಗೊಳಿಸಿದರು.
ಕಮಾಂಡ್ ಸೆಂಟರ್ನಲ್ಲಿ ಅಳವಡಿಸಿರುವ ಕೃತಕ ಬುದ್ಧಿಮತ್ತೆ (ಎಐ) ಕ್ಯಾಮರಾ ಅಳವಡಿಕೆ ಹಾಗೂ ಅದರಿಂದಾಗುವ ಅನುಕೂಲಗಳ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದರು. ನೂತನ ಕಮಾಂಡ್ ಸೆಂಟರ್ನಲ್ಲಿ ಡಯಲ್ -112 ಕಾಲ್ ಸೆಂಟರ್, ಮಹಿಳಾ ಸೇಫ್ಟಿ ಲ್ಯಾಂಡ್ ಕಮಾಂಡ್ ಸೆಂಟರ್ನಲ್ಲಿ ಅಳವಡಿಸಲಾಗಿರುವ ವಿವಿಧ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ಪಡೆದರು.
112ಕ್ಕೆ ಕರೆ ಮಾಡಿದರೆ ಲೊಕೇಷನ್ ಪತ್ತೆ: ಪೊಲೀಸ್ ನಿಯಂತ್ರಣ ಕೊಠಡಿ ಸಂಖ್ಯೆಯಾದ 112 ಕರೆ ಮಾಡಿದರೆ ಕರೆ ಮಾಡಿದ ಸ್ಥಳದ ಲೊಕೇಷನ್ ಲಭ್ಯವಾಗಲಿದೆ. ಕಷ್ಟದಲ್ಲಿರುವವರು ಅಥವಾ ಅನ್ಯಾಯವಾದಾಗ ಕರೆ ಮಾಡಿದ ಸಂದರ್ಭದಲ್ಲಿ ಲಭ್ಯವಾಗುವ ಲೊಕೇಷನ್ ಸಹಾಯದಿಂದ ಕ್ಷಣಾರ್ಧದಲ್ಲೇ ಪೊಲೀಸರ ನೆರವು ಸಿಗಲಿದೆ. ಮಾಹಿತಿ ಬರುತ್ತಿದ್ದಂತೆ ಕೂಡಲೇ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ನೆರವಿಗೆ ಧಾವಿಸಲಿದ್ದಾರೆ. ತಮ್ಮ ಠಾಣಾ ವ್ಯಾಪ್ತಿಯಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮರಾಗಳ ನೇರ ಸಂಪರ್ಕ ಕಮಾಂಡ್ ಸೆಂಟರ್ನಲ್ಲಿ ಇರಲಿದೆ. ಅಲ್ಲದೇ, ಕಾನೂನು ಹಾಗೂ ಸುವ್ಯವಸ್ಥೆಗೆ ಪೊಲೀಸ್ ಠಾಣೆಗಳು, ಎಂಟು ಡಿಸಿಪಿ ಕಚೇರಿಗಳು ಹಾಗೂ ಎಂಟು ಹೆಚ್ಚುವರಿ ವೀಕ್ಷಣಾ ಕೇಂದ್ರಗಳಲ್ಲಿ ಈ ಸೌಲಭ್ಯ ಕಲ್ಪಿಸಲಾಗಿದೆ. ಸೆರೆಯಾಗುವ ವಿಡಿಯೋ, ಪೋಟೋ ಒಂದು ತಿಂಗಳಿನವರೆಗೂ ಸ್ಟೋರ್ ಆಗಿರಲಿದೆ. ಅಪರಾಧ ಕೃತ್ಯಗಳು ನಡೆದಾಗ ಸಿಸಿಟಿವಿ ಕ್ಯಾಮರಾ ವಿಡಿಯೋ ಬಳಸಿಕೊಳ್ಳಬಹುದಾಗಿದೆ.
ಪೊಲೀಸ್ ಕಮಾಂಡ್ ಸೆಂಟರ್ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್ ಕ್ರೈಂ ಮ್ಯಾಪಿಂಗ್ ಮಾಡಲು ಸಹಕಾರಿ: ಸುಲಿಗೆ, ಕಳ್ಳತನ ಹಾಗೂ ಮಹಿಳೆ ಮೇಲಾಗುವ ಲೈಂಗಿಕ ದೌರ್ಜನ್ಯ ಸೇರಿ ವಿವಿಧ ಅಪರಾಧಗಳು ಪದೇ ಪದೆ ಒಂದು ಕಡೆ ನಡೆಯುವುದು ವರದಿಯಾದರೆ ತಂತ್ರಜ್ಞಾನ ನೆರವಿನಿಂದ ಸುಲಭವಾಗಿ ಕ್ರೈಂ ಮ್ಯಾಪಿಂಗ್ ಮಾಡಬಹುದಾಗಿದೆ. ಸಾಮಾಜಿಕ ಜಾಲತಾಣ ಹಾಗೂ ಸೋಷಿಯಲ್ ಡೆಮೊಗ್ರಾಫಿಕ್ ನೆರವಿನಿಂದ ಅಪರಾಧ ನಡೆಯುವ ಸ್ಥಳಗಳ ಬಗ್ಗೆ ಮ್ಯಾಪಿಂಗ್ ಮಾಡಲು ಎಐ ಗುರುತು ಮಾಡಲಿದೆ ಎಂದು ಪೊಲೀಸ್ ಆಯುಕ್ತ ಬಿ ದಯಾನಂದ್ ತಿಳಿಸಿದರು.
ಕಮಾಂಡ್ ಸೆಂಟರ್ ಉದ್ಘಾಟನೆ ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಿರ್ಭಯಾ ಯೋಜನೆಯಡಿ 661 ಕೋಟಿ ವ್ಯಯಿಸಲಾಗಿದೆ. ಇದನ್ನು ಬೆಂಗಳೂರು ನಗರದ ಸುರಕ್ಷತೆಗಾಗಿ ನಿರ್ಮಿಸಲಾಗಿದೆ. ವಿಶೇಷವಾಗಿ ಮಹಿಳೆಯರು, ಮಕ್ಕಳು, ಅಂಗವಿಕಲರ ಸುರಕ್ಷತೆ ದೃಷ್ಟಿಯಿಂದ ಆತ್ಯಾಧುನಿಕ ಕಮಾಂಡ್ ಸೆಂಟರ್ ನಿರ್ಮಿಸಲಾಗಿದೆ. ದೌರ್ಜನ್ಯಕ್ಕೊಳಗಾದ ಮಹಿಳೆಯರು ಕರೆ ಮಾಡಿದರೆ ಏಳು ನಿಮಿಷಕ್ಕೆ ಪೊಲೀಸರು ಸ್ಥಳಕ್ಕೆ ನೆರವಿಗೆ ಧಾವಿಸಲಿದ್ದಾರೆ. ಕೇಂದ್ರ ಸರ್ಕಾರವು ಬೆಂಗಳೂರು ಹೊರತುಪಡಿಸಿ ದೇಶದಲ್ಲಿ ಏಳು ನಗರಗಳಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ. ಈ ಪೈಕಿ ಬೆಂಗಳೂರು ನಗರದಲ್ಲಿ ಪ್ರಥಮವಾಗಿ ಸೇಫ್ ಸಿಟಿ ಯೋಜನೆ ಜಾರಿಗೊಳಿಸಿದ ಕೀರ್ತಿ ನಮ್ಮದಾಗಿದೆ. ಈ ಕಟ್ಟಡವು 15 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ:ಬೆಂಗಳೂರಿನಲ್ಲಿ ಕಮಾಂಡ್ ಸೆಂಟರ್ ನಿರ್ಮಾಣ: ಗೃಹ ಸಚಿವ ಜಿ ಪರಮೇಶ್ವರ್