ಬೆಂಗಳೂರು : ಇನ್ಮುಂದೆ ಚುನಾವಣಾ ರಾಜಕೀಯದಲ್ಲಿ ಇರದಂತೆ ಕೇಂದ್ರದ ನಾಯಕರು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಹಿರಿಯ ನಾಯಕ ಡಿ ವಿ ಸದಾನಂದಗೌಡ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ. ಆದರೆ ರಾಜಕಾರಣದಲ್ಲಿ ಸಕ್ರಿಯರಾಗಿರಲಿದ್ದಾರೆ ಎಂದು ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಡಾಲರ್ಸ್ ಕಾಲೋನಿ ನಿವಾಸದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಣೆ ಮಾಡುವ ಬಗ್ಗೆ ಸದಾನಂದಗೌಡರಿಗೆ ಕೇಂದ್ರ ಸೂಚನೆ ಕೊಟ್ಟಿದೆ. ಹಾಗಾಗಿ ಅವರು ಇನ್ಮುಂದೆ ಚುನಾವಣೆಗೆ ನಿಲ್ಲಲ್ಲ. ಆದರೆ ಪಕ್ಷದ ಕಾರ್ಯಕ್ರಮದಲ್ಲಿ ಸಕ್ರಿಯರಾಗಿ ಇರಲು ಹೇಳಿ ನೇರವಾಗಿ ಚುನಾವಣೆಗೆ ನಿಲ್ಲದಂತೆ ಸೂಚಿಸಿದೆ. ಅದನ್ನು ಸದಾನಂದಗೌಡ ಪಾಲನೆ ಮಾಡುತ್ತಿದ್ದಾರೆ ಎಂದರು.
ಮಾಜಿ ಸಚಿವ ಎಸ್ ಟಿ ಸೋಮಶೇಖರ್ ಜಾಮೂನು, ವಿಷ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ ಅವರು, ಸೋಮಶೇಖರ್ ಬಳಿ ಮಾತಾಡಿದ್ದೇನೆ. ಅವರು ಪಕ್ಷ ಬಿಟ್ಟು ಹೋಗಲ್ಲ. ಅಸಮಾಧಾನ ಇದ್ದರೆ ಮಾತಾಡಿ ಸರಿಪಡಿಸುತ್ತೇನೆ ಎಂದು ತಿಳಿಸಿದರು.
ಸದಾನಂದಗೌಡರ ನಿವೃತ್ತಿ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಡಿಸಿಎಂ ಡಾ. ಅಶ್ವತ್ಥನಾರಾಯಣ್, ಸದಾನಂದಗೌಡರು ಬಹುಕಾಲ ರಾಜಕೀಯದಲ್ಲಿ ಇದ್ದರು. ರಾಜಕೀಯದಿಂದ ನಿವೃತ್ತಿ ಘೋಷಣೆ ಮಾಡಿದ್ದಾರೆ. ಅವರ ಆಲೋಚನೆ ತಿಳಿಸಿದ್ದಾರೆ. ಯಾವ ರೀತಿ ಪಕ್ಷ ಹೇಳುತ್ತದೆ ನೋಡೋಣ. ಪಕ್ಷ ಎಲ್ಲವನ್ನೂ ಕೊಟ್ಟಿದೆ. ಐದು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ. ಯಾರನ್ನೂ ಅಗೌರವದಿಂದ ನಡೆಸಿಕೊಳ್ಳಲ್ಲ ಎಂದು ತಿಳಿಸಿದರು.
ನಮ್ಮ ಸ್ನೇಹಿತ ಸೋಮಶೇಖರ್ ಯಾವ ಹಿನ್ನೆಲೆಯಲ್ಲಿ ಹೇಳಿಕೆ ಕೊಟ್ಟಿದ್ದಾರೆ ಅನ್ನೋದು ಗೊತ್ತಿಲ್ಲ. ಅವರಿಗೆ ಬಿಜೆಪಿ ಎಲ್ಲಾ ಸ್ಥಾನಮಾನ ಕೊಟ್ಟು ಗೌರವಿಸಿದೆ. ಒಂದು ದಿನವೂ ಕಡೆಗಣಿಸಿಲ್ಲ. ಅವರಿಗೆ ಅಳುಕು ಬೇಡ. ಜಾಮೂನು, ವಿಷ ಎಲ್ಲಾ ಕಾಂಗ್ರೆಸ್ನಲ್ಲಿ ಕೊಡೋದು. ಅವರ ಹೆಗಲ ಮೇಲೆ ಭಾರ ಹಾಕಿಲ್ಲ, ಸೋಮಶೇಖರ್ ಅವರಿಗೆ ಅನ್ಯಾಯ ಆಗಿಲ್ಲ. ಏನೇ ಮಾತು ಹೇಳಿದ್ದರೂ ವಾಪಸ್ ಪಡೆಯಲಿ. ಬಿಜೆಪಿಯಲ್ಲಿ ಇದ್ದು, ಮನೆಯಲ್ಲೇ ಇದ್ದು ಮನೆ ಯಜಮಾನರ ಬಗ್ಗೆ ಮಾತಾಡೋದು. ಪಕ್ಷದ ವಿರುದ್ಧ ಹೇಳಿಕೆ ಕೊಡುವುದು ಸೂಕ್ತ ಅಲ್ಲ. ಅವರ ವ್ಯಕ್ತಿತ್ವಕ್ಕೂ ಸರಿಯಲ್ಲ. ಸೋಮಶೇಖರ್ ಅವರು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಮೆಚ್ಚಿಸಲು ಮಾತನಾಡುತ್ತಿದ್ದಾರೆ. ಅವರೇ ಮುಳುಗುತ್ತಿದ್ದಾರೆ. ಯಾಕೆ ಆ ಹಡಗು ಹತ್ತುತ್ತಿದ್ದಾರೆ ಗೊತ್ತಿಲ್ಲ ಎಂದು ಅಶ್ವತ್ಥನಾರಾಯಣ್ ಹೇಳಿದರು.
ಬಿಜೆಪಿ ನನಗೆ ಎಲ್ಲವನ್ನು ಕೊಟ್ಟಿದೆ : ಬುಧವಾರ ಹಾಸನ ಜಿಲ್ಲೆಯಲ್ಲಿ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ನಂತರ ನಗರದ ಖಾಸಗಿ ಹೋಟೆಲ್ನಲ್ಲಿ ಮಾತನಾಡಿದ್ದ ಡಿ.ವಿ ಸದಾನಂದಗೌಡ ಅವರು, ನಾನು ಚುನಾವಣಾ ರಾಜಕೀಯದಿಂದ ದೂರ ಉಳಿಯಲು ನಿರ್ಧಾರ ಮಾಡಿದ್ದೇನೆ. ರಾಜ್ಯದಲ್ಲಿ ಈ ಬಾರಿ ಬಿಜೆಪಿ ಸೋಲಿಗೆ ನಮ್ಮ ಕೆಲವು ನಿರ್ಧಾರಗಳು ಕಾರಣವಾಗಿವೆ. ನನಗೆ ಪಕ್ಷ ಎಲ್ಲವನ್ನು ಕೊಟ್ಟಿದೆ. ಯಡಿಯೂರಪ್ಪ ಬಿಟ್ಟರೆ ಪಕ್ಷದಲ್ಲಿ ನಾನೇ ಗರಿಷ್ಠ ಲಾಭವನ್ನು ಪಡೆದವನು. ನಾನು ಮತ್ತೆ ಅಧ್ಯಕ್ಷನಾಗುವ ಆಸೆಯಿಲ್ಲ. ಈ ಹಿಂದೆ ಸಿಎಂ ಆಗಿದ್ದೆ, ಕೇಂದ್ರ ಸಚಿವನಾಗಿದ್ದೆ, ಪಕ್ಷದ ಅಧ್ಯಕ್ಷ ಆಗಿದ್ದೆ. ಇನ್ನೇನು ಬೇಕಿಲ್ಲ ನನಗೆ. ಸ್ವಂತ ಶಕ್ತಿಯಿಂದ ಬಿಜೆಪಿ ಕಟ್ಟುತ್ತೇವೆ. ಯಾರನ್ನೂ ಸೆಳೆಯೋದಿಲ್ಲ ಎಂದು ನಿವೃತ್ತಿ ಬಗ್ಗೆ ಮೌನ ಮುರಿದಿದ್ದರು.
ಇದನ್ನೂ ಓದಿ :ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಮಾಜಿ ಸಿಎಂ ಡಿವಿ ಸದಾನಂದಗೌಡ