ಬೆಂಗಳೂರು: ಸಾವಿನ ಸಂಖ್ಯೆ ಮುಚ್ಚಿಟ್ಟು ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ ಎಂದು ರಾಜ್ಯ ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಆರೋಪ ಮಾಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಮೇ ತಿಂಗಳ ಮೊದಲ 15 ದಿನದಲ್ಲಿ ರಾಜ್ಯಾದ್ಯಂತ 5,538 ಜನರು ಕೊರೊನಾದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಬೆಂಗಳೂರೊಂದರಲ್ಲೇ ಸಾವಿನ ಸಂಖ್ಯೆ 2,844. ಅಂದರೆ ದಿನವೊಂದಕ್ಕೆ ಸರಾಸರಿ 370 ಜನರು ಕೊರೊನಾಗೆ ಬಲಿಯಾಗುತ್ತಿದ್ದಾರೆ. ಆದರೂ ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ ಎಂದು ಹೇಳುತ್ತಿರುವುದು ಹಸಿ ಸುಳ್ಳಲ್ಲದೇ ಮತ್ತಿನ್ನೇನು? ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಆಕ್ಸಿಜನ್ ಸಮಸ್ಯೆಯೇ ಇಲ್ಲ ಎಂದು ಮುಖ್ಯಮಂತ್ರಿಗಳು, ಸಚಿವರುಗಳು ಹೇಳುತ್ತಿದ್ದಾರೆ. ಹಾಗಾದರೆ 15 ದಿನದಲ್ಲಿ 5,538 ಜನ ಸತ್ತಿದ್ದು ಹೇಗೆ?. ಆಕ್ಸಿಜನ್ನ ತೀವ್ರ ಅಭಾವದಿಂದಲೇ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಸಾಯುತ್ತಿದ್ದಾರೆ. ಈ ಸರ್ಕಾರ ಕೆಲಸ ಮಾಡುವ ಬದಲು ಇಮೇಜ್ ಬಿಲ್ಡಿಂಗ್ ಮಾಡಲು ಯತ್ನಿಸುತ್ತಿದೆ. ಇದು ಆರೋಗ್ಯ ಇಲಾಖೆ ಕೊಟ್ಟಿರುವ ಲೆಕ್ಕ. ಇನ್ನು ಸರ್ಕಾರ ಮುಚ್ಚಿಟ್ಟಿರೋ ಸಾವುಗಳು ಮತ್ತು ಬೆಡ್ ಇಲ್ಲದೇ ರಸ್ತೆಗಳಲ್ಲೇ ಪ್ರಾಣ ಬಿಟ್ಟವರು, ಮನೆಗಳಲ್ಲೇ ಜೀವ ಬಿಟ್ಟವರ ಸಂಖ್ಯೆ ಇನ್ನೂ ದೊಡ್ದದಿದೆ. ಆದರೂ ತಮ್ಮ ವೈಫಲ್ಯ ಮುಚ್ಚಿಟ್ಟುಕೊಳ್ಳಲು ರಾಜ್ಯ ಬಿಜೆಪಿ ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ ಎಂದು ಸುಳ್ಳು ಹೇಳುತ್ತಿದೆ ಎಂದು ದೂರಿದ್ದಾರೆ.