ಬೆಂಗಳೂರು:ಎರಡು ಕಡೆ ಸೋತು, ಒಂದು ಕಡೆ ಗೆದ್ದಿದ್ದೇವೆ ಅಂದ ಮಾತ್ರಕ್ಕೆ ಇದು ರಾಜಕೀಯ ಹಿನ್ನಡೆಯಲ್ಲ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ರಾಜ್ಯದ 3 ಕ್ಷೇತ್ರಗಳ ಬೈ ಎಲೆಕ್ಷನ್ನಲ್ಲಿ ಮಸ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರುವಿಹಾಳ ಗೆಲುವು ಸಾಧಿಸಿದ್ದಾರೆ. ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಅವರು ಕಡಿಮೆ ಅಂತರದಿಂದ ಸೋಲು ಕಂಡಿದ್ದಾರೆ. ಬೆಳಗಾವಿಯಲ್ಲಿ ನಮ್ಮ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಬಂದಿಲ್ಲ. ಆದ್ರೆ ಇದು ರಾಜಕೀಯ ಹಿನ್ನಡೆಯಲ್ಲ ಎಂದು ಹೇಳಿದ್ದಾರೆ.
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ತೀರಾ ಕಡಿಮೆ ಅಂತರದಲ್ಲಿ ಸೋಲು ಕಂಡಿದೆ. ಸತೀಶ್ ಜಾರಕಿಹೊಳಿಯವರು ಸ್ಪರ್ಧೆಗೆ ಟಿಕೆಟ್ ಕೇಳಿರಲಿಲ್ಲ. ಪಕ್ಷದ ನಾಯಕರ ಒತ್ತಾಯದ ಮೇಲೆ ಸ್ಪರ್ಧೆ ಮಾಡಿದ್ದರು. ಕಾಂಗ್ರೆಸ್‌ಗೆ ಬೆಂಬಲಿಸಿದ ಮತದಾರರು ಮತ್ತು ನಮ್ಮ ಪಕ್ಷದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ.
ಮಸ್ಕಿ ಕ್ಷೇತ್ರದ ಗೆಲುವು ಮತ್ತು ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಪಡೆದ ಮತಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ಬಂದಂತಾಗಿದೆ. ಕಳೆದ ಚುನಾವಣೆಯಲ್ಲಿ ಬೆಳಗಾವಿಯಲ್ಲಿ 4 ಲಕ್ಷಕ್ಕೂ ಹೆಚ್ಚು ಅಂತರದಿಂದ ಗೆದ್ದಿದ್ದ ಬಿಜೆಪಿ ಈಗ ಬೆರಳೆಣಿಕೆ ಮತಗಳಿಂದ ಗೆದ್ದಿದೆ. ಬಸವಕಲ್ಯಾಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಲಾ ಬಿ. ನಾರಾಯಣ್ ರಾವ್ ಅವರು ಗೆಲ್ಲುವ ನಿರೀಕ್ಷೆ ಇತ್ತು. ಆದರೆ ಜೆಡಿಎಸ್ ಸ್ಪರ್ಧೆಯಿಂದ ಮತ ವಿಭಜನೆಯಾದ ಪರಿಣಾಮ ಕಾಂಗ್ರೆಸ್ ಸೋಲುವಂತಾಗಿದೆ. ಕ್ಷೇತ್ರದಲ್ಲಿ ಪಕ್ಷ ಸಂಘಟನೆಯತ್ತ ಗಮನಹರಿಸುತ್ತೇವೆ ಎಂದು ಎಸ್.ಆರ್. ಪಾಟೀಲ್ ಹೇಳಿದ್ದಾರೆ.
ಇದನ್ನೂ ಓದಿ:ಬಸನಗೌಡ ತುರುವಿಹಾಳಗೆ ಅಭಿನಂದನೆ ಸಲ್ಲಿಸಿದ ಸಿದ್ದರಾಮಯ್ಯ, ಎಸ್.ಆರ್.ಪಾಟೀಲ್