ಬೆಂಗಳೂರು : ದಿನೇದಿನೆ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಇಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌ರನ್ನ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ಭೇಟಿ ಮಾಡಿದರು.
ಸಚಿವರ ನಿವಾಸದಲ್ಲಿ ಭೇಟಿ ಮಾಡಿದ ಸಾ ರಾ ಗೋವಿಂದ್, ವ್ಯಾಕ್ಸಿನ್ ಕೊಡುವುದರ ಬಗ್ಗೆ ಡಾ. ಸುಧಾಕರ್ ಅವರಿಗೆ ಮನವಿ ಕೊಟ್ಟಿದ್ದೇವೆ. ನಮ್ಮ ಸಾಕಷ್ಟು ಜನ ಕಾರ್ಮಿಕರು, ನಿರ್ಮಾಪಕರು ಹಂಚಿಕೆದಾರರು, ನಿರ್ದೇಶಕರು ಇದಾರೆ. ಅವರಿಗೆ ಎಲ್ಲಿ ಹೋಗಿ ಎಲ್ಲಿ ಲಸಿಕೆ ಪಡಿಬೇಕು ಅಂತ ಗೊತ್ತಿಲ್ಲ.
ಇದರಿಂದ ಕಷ್ಟ ಆಗುತ್ತಿದೆ, ನಮಗೆ ದಯವಿಟ್ಟು ಲಸಿಕೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದೇವೆ. ಇಂದು ಸಿಎಂ ಯಡಿಯೂರಪ್ಪರಿಗೂ, ಡಿಸಿಎಂ ಅಶ್ವತ್ಥ್ ನಾರಾಯಣ್‌ರಿಗೂ ಕೂಡ ಮನವಿ ಮಾಡಿದ್ದೇವೆ, ಆದಷ್ಟು ಬೇಗೆ ವ್ಯವಸ್ಥೆ ಮಾಡಿಕೊಡುವ ಭರವಸೆ ನೀಡಿದ್ದಾರೆ ಎಂದರು.
ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಸುಧಾಕರ್, ಚಲನಚಿತ್ರ ವಾಣಿಜ್ಯ ಮಂಡಳಿಯ ಸದಸ್ಯರು ಇಂದು ಭೇಟಿ ಮಾಡಿದ್ದಾರೆ. ಅವರ ಬೇಡಿಕೆಯ ಕುರಿತು ತಾಂತ್ರಿಕ ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಿ ನಂತರ ತೀರ್ಮಾನ ಕೈಗೊಳ್ಳಲಾಗುವುದು ಅಂದರು.
ಆರೋಗ್ಯ ಸಚಿವರಿಗೆ ಸಾ.ರಾ ಗೋವಿಂದ್ ಮನವಿ ಕೋವಿಡ್ ಲಸಿಕೆ ಹಂಚಿಕೆ ವಿಚಾರ ಬಯೋಟೆಕ್ ನಿರ್ದೇಶಕರೊಂದಿಗೆ ಮಾತುಕತೆ :ಭಾರತ್ ಬಯೋಟೆಕ್ ನಿರ್ದೇಶಕರ ಜೊತೆ ವಿಡಿಯೋ ಸಂವಾದ ಮೂಲಕ ಮಾತಾಡಿದ್ದೇನೆ. ನಿರ್ದೇಶಕರು ಅನೇಕ ಮಾಹಿತಿ ಕೊಟ್ಟಿದ್ದು, ಅವರ ಆದ್ಯತೆ ಮೇರೆಗೆ ಲಸಿಕೆ ನೀಡೋದಾಗಿ ಭರವಸೆ ನೀಡಿದ್ದಾರೆ.
ಈಗ ಭಾರತ್ ಬಯೋಟೆಕ್ 1 ಕೋಟಿ ಡೋಸ್ ಮಾತ್ರ ಉತ್ಪಾದನೆ ಮಾಡುತ್ತಿದೆ. ಮಾಲೂರಿನಲ್ಲಿ ಪ್ರೊಡೆಕ್ಷನ್ ಪ್ರಾರಂಭ ಮಾಡಿದರೆ ಜೂನ್ ಅತ್ಯಂಕ್ಕೆ 1 ಕೋಟಿ, ಜುಲೈನಲ್ಲಿ 2-3 ಕೋಟಿ, ಆಗಸ್ಟ್ 4- 5 ಕೋಟಿ ಡೋಸ್ ಉತ್ಪಾದನೆ ಆಗುತ್ತೆ ಅಂತ ಹೇಳಿದ್ದಾರೆ.
ಕರ್ನಾಟಕಕ್ಕೆ ಪ್ರಾಶಸ್ತ್ಯದಲ್ಲಿ ಲಸಿಕೆ ಕೊಡೋದಾಗಿ ಭರವಸೆ ಕೊಟ್ಟಿದ್ದಾರೆ. ನಮಗೆ ಶೆಡ್ಯೂಲ್ಡ್ ಮಾಡಬೇಕು ಅಂತ ಮನವಿ ಮಾಡಿದ್ದೇವೆ.
ಇದಕ್ಕಾಗಿ ನಮ್ಮ ಅಧಿಕಾರಿಗಳನ್ನು ನೇಮಕ ಮಾಡುತ್ತೇವೆ. ಆದಷ್ಟು ಬೇಗ ಲಸಿಕೆ ಜನರಿಗೆ ಕೊಡುವ ಕೆಲಸ ಮಾಡುತ್ತೇವೆ ಎಂದರು.
ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕು ಹೆಚ್ಚಳ :ನಗರ ಪ್ರದೇಶ ತೊರೆದ ಜನರು ಗ್ರಾಮೀಣ ಭಾಗಕ್ಕೆ ಸೇರಿದ ಪರಿಣಾಮ ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗಿದೆ. ಈ ಕುರಿತು ಟಾಸ್ಕ್ ಫೋರ್ಸ್‌ನಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಮನೆಯಲ್ಲಿ ಐಸೋಲೇಶನ್ ಇರೋರಿಂದ ಸೋಂಕು ಹರಡುತ್ತಿದೆ. ಹೀಗಾಗಿ, ಪ್ರತ್ಯೇಕ ರೂಂ ವ್ಯವಸ್ಥೆ ಇರದೇ ಇರೋರು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ಗೆ ದಾಖಲಾಗಬೇಕು. ಈ ನಿಟ್ಟಿನಲ್ಲಿ ನಿಯಮ ಜಾರಿಗೆ ತರಲಾಗಿದೆ.
ಡಿಸಿಗಳು ಕಡ್ಡಾಯವಾಗಿ ಈ ನಿಯಮ ಪಾಲನೆ ಮಾಡಬೇಕು. ಮನೆಯಲ್ಲಿಯೇ ಚಿಕಿತ್ಸೆ ಪಡೆಯುವಂತೆ ಇಲ್ಲ. ಕಡ್ಡಾಯವಾಗಿ ಪ್ರಾಥಮಿಕ ಚಿಕಿತ್ಸಾ ವಲಯದ ಕೇರ್ ಸೆಂಟರ್‌ಗೆ ಅಡ್ಮಿಟ್ ಆಗಬೇಕು.
ಕೇರ್ ಸೆಂಟರ್‌ನಲ್ಲಿ ಅಗತ್ಯ ಚಿಕಿತ್ಸೆ ಆರೋಗ್ಯ ಇಲಾಖೆ ನೀಡುತ್ತೆ. ಕೇಸ್ ಹೆಚ್ಚಳ ಆಗಬಾರದು ಅಂದ್ರೆ ಈ ಕ್ರಮ ಮುಖ್ಯ. ಹೀಗಾಗಿ ಈ ನಿಯಮ ಜಾರಿಗೆ ತರಲಾಗಿದೆ ಎಂದರು.
ಲಸಿಕಾ ಮಾರಾಟ-ಕಾಂಗ್ರೆಸ್ ಅಭಿಯಾನ : ಲಸಿಕೆ ಮಾರಾಟ ಮಾಡಿದ್ದಾರೆ ಅನ್ನೋ ಕಾಂಗ್ರೆಸ್ ಟ್ವಿಟರ್ ಅಭಿಯಾನ ವಿಚಾರವಾಗಿ ಸಚಿವ ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರ ಲಸಿಕೆ ಯಾರಿಗೂ ಮಾರಾಟ ಮಾಡಿಲ್ಲ.
ಮಾನವೀಯತೆ ದೃಷ್ಟಿಯಿಂದ ಮೋದಿ ಲಸಿಕೆ ಉಚಿತವಾಗಿ ಕೊಟ್ಟಿದ್ದಾರೆ. ಲಸಿಕೆ ಕೊಡೊವಾಗ ಎರಡನೇ ಅಲೆ ಇಷ್ಟು ಪ್ರಮಾಣದ ಪ್ರಭಾವ ಬೀರುತ್ತೆ ಅಂತ ತಜ್ಞರು ಹೇಳಿರಲಿಲ್ಲ. ಈಗ ಇದರಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ.
ಕಾಂಗ್ರೆಸ್ ಪ್ರಾರಂಭದಿಂದಲೂ ರಾಜಕೀಯ ಮಾಡಿಕೊಂಡು ಬರ್ತಿದೆ. ಸಹಕಾರ ಕೊಡ್ತೀವಿ ಅಂತ ರಾಜಕೀಯ ಮಾಡಿಕೊಂಡೆ ಬರುತ್ತಿದೆ. ನಿಮಗೆ ಬದ್ದತೆ ಇದ್ದರೆ ಜನರಪರ ನಿರ್ಧಾರಕ್ಕೆ ಬೆಂಬಲ ಕೊಡಿ, ಇಂತಹ ಸಮಯದಲ್ಲಿ ಕಾಂಗ್ರೆಸ್ ರಾಜಕೀಯ ಮಾಡೋದು ಸರಿಯಲ್ಲ ಎಂದು ಕಾಂಗ್ರೆಸ್ ವಿರುದ್ಧ ಸಚಿವ ಸುಧಾಕರ್ ಕಿಡಿಕಾರಿದರು.